Connect with us

Chamarajanagar

ನಂ.1 ಶತ್ರು ಎಂದು ಹೇಳಿ ಬಿಎಸ್‍ವೈಯನ್ನು ಹೊಗಳಿದ ವಾಟಾಳ್

Published

on

ಚಾಮರಾಜನಗರ: ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇಲ್ಲ ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ನೆರೆಯ ಕೇರಳ ನಡೆಸುತ್ತಿರುವ ಒತ್ತಡದ ತಂತ್ರಗಳನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ಚೆಕ್ ಪೋಸ್ಟ್ ಬಳಿ ವಾಟಾಳ್ ನಾಗರಾಜ್ ನಡುರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.

ಪ್ರತಿಭಟನೆಯಿಂದಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಿದರೆ ವನ್ಯಜೀವಿಗಳಿಗೆ ಕಂಟಕವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸ್ಮಗ್ಲಿಂಗ್ ನಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ಹಾಗೂ ಯಾವುದೇ ಕಾರಣಕ್ಕೂ ನಿಷೇಧ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.

ಬಂಡೀಪುರದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪನವರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಎಸ್‍ವೈ ಅವರಿಂದಲೇ ರಾಜ್ಯದಲ್ಲಿ 25 ಸಂಸದರು ಗೆದ್ದಿದ್ದಾರೆ. ಯಡಿಯೂರಪ್ಪ ಇಲ್ಲದಿದ್ದರೆ ಯಾವ ಈಶ್ವರಪ್ಪನೂ ಇಲ್ಲ, ಗಣೇಶಪ್ಪನು ಎಂದು ವ್ಯಂಗವಾಡಿದರು.

ಯಡಿಯೂರಪ್ಪ ಮತ್ತು ನಾನು ಹಿಂದೆ ಆತ್ಮೀಯ ಸ್ನೇಹಿತರಾಗಿದ್ದೆವು. ಆದರೆ ನನ್ನ ವಿರುದ್ಧವೇ ಎರಡು ಬಾರಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಯಡಿಯೂರಪ್ಪ ನನ್ನ ನಂಬರ್ ಒನ್ ಶತ್ರು ಎನ್ನುತ್ತಲೇ ಬಿಎಸ್‍ವೈ ಬಗ್ಗೆ ವಾಟಾಳ್ ನಾಗರಾಜ್ ಅನುಕಂಪದ ಮಾತುಗಳನ್ನಾಡಿದ್ದಾರೆ. ಬಿಎಸ್‍ವೈ ಈಗ ಒಬ್ಬಂಟಿ, ರೂಂನಲ್ಲಿ ಅವರೊಬ್ಬರೆ ಮಲಗುತ್ತಾರೆ, ಅಕ್ಕಪಕ್ಕ ಯಾವ ಸ್ನೇಹಿತರೂ ಮಲಗುವುದಿಲ್ಲ, ರೂಂನಲ್ಲಿ ಮಲಗಿ ತಮ್ಮ ಸ್ಥಿತಿ ಹೀಗೇಕೆ ಆಯಿತು ಎಂದು ತಪಸ್ಸು ಮಾಡುತ್ತಾರೆ. ಒಬ್ಬರೇ ಮಲಗುತ್ತಾರೆ, ಒಬ್ಬರೇ ಸ್ನಾನ ಮಾಡ್ತಾರೆ, ಒಬ್ಬರೇ ತಿಂಡಿ ತಿನ್ನುತ್ತಾರೆ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿಯಲ್ಲಿ ಯಡಿಯೂರಪ್ಪನವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಹಿಂದೆ ಬಿಎಸ್‍ವೈ ವಿರುದ್ಧ ಮಾತನಾಡಿದ್ದ ನಾಯಕರಿಗೆ ಉನ್ನತ ಹುದ್ದೆ ನೀಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಅಲ್ಲದೆ, ಈಶ್ವರಪ್ಪನವರು ಸಹ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಹರಿಹಾಯ್ದಿದ್ದರು.

Click to comment

Leave a Reply

Your email address will not be published. Required fields are marked *

www.publictv.in