ಅದ್ಭುತ ಗಾಯನದಿಂದ ಜನಪ್ರಿಯರಾಗಿರುವ ಗಾಯಕಿ ಕೆ.ಎಸ್.ಚಿತ್ರಾ (K.S. Chithra) ಅವರು ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದರ ಹಾಡಿಗೆ ಧ್ವನಿಯಾಗಿದ್ದಾರೆ. ವಸಿಷ್ಠ ಸಿಂಹ (Vasishta Simha) ನಾಯಕರಾಗಿ ನಟಿಸುತ್ತಿರುವ ‘ವಿಐಪಿ’ ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ ತಾಯಿ ಮತ್ತು ಮಗನ ಬಾಂಧವ್ಯ ಸಾರುವ ‘ಬಾರೋ ಕಂದ’ ಎಂಬ ಹಾಡನ್ನು ಇತ್ತೀಚೆಗೆ ಚೆನ್ನೈನಲ್ಲಿ ಕೆ.ಎಸ್.ಚಿತ್ರಾ ಅವರು ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.
View this post on Instagram
ದೇಶಕಂಡ ಜನಪ್ರಿಯ ಗಾಯಕಿ ಚಿತ್ರ ಅವರು ನಮ್ಮ ಚಿತ್ರದ ಹಾಡನ್ನು ಹಾಡಿದ್ದು ತುಂಬಾ ಸಂತೋಷವಾಗಿದೆ. ‘ಬಾರೋ ಕಂದ’ ಹಾಡನ್ನು ಚಿತ್ರಾ ಅವರು ಅದ್ಭುತವಾಗಿ ಹಾಡಿದ್ದಾರೆ. ಹಾಡು ಹಾಡಿದ ನಂತರ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಅವರ ಬಳಿ ನಾನು ಹಾಡಿರುವುದು ನಿಮಗೆ ಇಷ್ಟವಾಯಿತಾ? ಇಲ್ಲವಾದ್ದಲ್ಲಿ ಇನ್ನೊಮ್ಮೆ ಹಾಡುತ್ತೇನೆ ಎಂದರು. ಅಂತಹ ದೊಡ್ಡ ಗಾಯಕಿಯಾದರೂ ಅವರಲ್ಲಿರುವ ಸರಳತೆ ಎಲ್ಲರಿಗೂ ಮಾದರಿ ಎಂದು ತಿಳಿಸಿರುವ ಕಾರ್ಯಕಾರಿ ನಿರ್ಮಾಪಕ ಅಫ್ಜಲ್, ಬೆಂಗಳೂರು ಸುತ್ತಮುತ್ತ ‘ವಿಐಪಿ’ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ ಎಂದಿದ್ದಾರೆ.
ಈಗಾಗಲೇ ವಸಿಷ್ಠ ಸಿಂಹ ಅವರ ಫಸ್ಟ್ ಲುಕ್ ಪೋಸ್ಟರ್ ನಿಂದ ‘ವಿಐಪಿ’ (VIP Film) ಚಿತ್ರ ಎಲ್ಲೆಡೆ ಜನಪ್ರಿಯವಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಅದ್ಭುತ ಸಾಹಸ ಸನ್ನಿವೇಶಗಳಿದೆ. ವಸಿಷ್ಠ ಸಿಂಹ ಅವರ ಈವರೆಗಿನ ಪಾತ್ರಗಳಿಗಿಂತ ನಮ್ಮ ಚಿತ್ರದ ಪಾತ್ರ ವಿಭಿನ್ನವಾಗಿರುತ್ತದೆ ಎಂದು ನಿರ್ದೇಶಕ ಬ್ರಹ್ಮ ತಿಳಿಸಿದ್ದಾರೆ. ಇದನ್ನೂ ಓದಿ:ಈ ಕಂಡೀಷನ್‌ಗೆ ಓಕೆ ಅಂದ್ರೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಲು ಸಿದ್ಧ: ರಕುಲ್
ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್. ಮೋಹನ್ ಕುಮಾರ್ ಹಾಗೂ ಆರ್.ಅಚ್ಯುತ್ ರಾವ್ ಅವರ ನಿರ್ಮಾಣದಲ್ಲಿ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು. ಮೇಕಿಂಗ್ ನಿಂದ ಸದ್ದು ಮಾಡುತ್ತಿರುವ `ವಿಐಪಿ’ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ , ಅಫ್ಜಲ್, ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್, ಸನತ್, ಶ್ರೀದತ್ತ ಮುಂತಾದವರು ಅಭಿನಯಿಸುತ್ತಿದ್ದಾರೆ.
ರಾಜೀವ್ ಗಣೇಸನ್ ಛಾಯಾಗ್ರಹಣ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಸತೀಶ್ ಚಂದ್ರಯ್ಯ ಸಂಕಲನ ಈ ಚಿತ್ರಕ್ಕಿದೆ.