ನೀನಾಸಂ ಮಂಜು ಆಕ್ಷನ್ ಕಟ್ ಹೇಳಿರುವ ‘ಕನ್ನೇರಿ’ ಸಿನಿಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಬಿಡುಗಡೆಯಾಗುತ್ತಿರುವ ಚಿತ್ರದ ಸ್ಯಾಂಪಲ್ ಗಳು ಸಿನಿಮಾ ಮೇಲಿನ ನಿರೀಕ್ಷೆ, ಕುತೂಹಲವನ್ನೂ ಹೆಚ್ಚು ಮಾಡುತ್ತಿದೆ. ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವನ್ನು ನೀನಾಸಂ ಮಂಜು ಕಮರ್ಶಿಯಲ್ ಎಳೆಯಲ್ಲಿ ಕಟ್ಟಿಕೊಟ್ಟು ತೆರೆಗೆ ತರಲು ಸಜ್ಜಾಗಿದ್ದಾರೆ. ಬಿಡುಗಡೆಗೂ ಮುನ್ನವೇ ಒಂದೊಳ್ಳೆ ಪಾಸಿಟಿವ್ ಬಝ್ ಕ್ರಿಯೇಟ್ ಮಾಡಿರುವ ಈ ಚಿತ್ರಕ್ಕೆ ಚಿತ್ರರಂಗದ ಹಲವರು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಕನ್ನೇರಿ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭ.
Advertisement
ಹೌದು, ಚಿತ್ರದ ಬಹು ನಿರೀಕ್ಷಿತ ಹಾಡು ‘ಕಾಣದ ಊರಿಗೆ ಕೂಲಿಗೆ ಹೊರಟೋಳೆ’ ಹಾಡಿನ ಬಿಡುಗಡೆ ಸಲುವಾಗಿ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆಗೆ ಸ್ಯಾಂಡಲ್‍ವುಡ್ ಖ್ಯಾತ ನಟ ವಸಿಷ್ಠ ಸಿಂಹ ಭಾಗಿಯಾಗಿ ಹಾಡನ್ನು ಬಿಡುಗಡೆ ಮಾಡಿ ಪ್ರೋತ್ಸಾಹ ನೀಡಿದ್ದಾರೆ. ಇವರೊಂದಿಗೆ ಕಲಾವಿದರಾದ ಚಕ್ರವರ್ತಿ ಚಂದ್ರಚೂಡ್, ನಿರ್ಮಲ, ಸರ್ದಾರ್ ಸತ್ಯ ಕೂಡ ಭಾಗಿಯಾಗಿ ಒಂದೊಳ್ಳೆ ಸಬ್ಜೆಕ್ಟ್ ಇರುವ ಚಿತ್ರಕ್ಕೆ ತಮ್ಮ ಸಾಥ್ ನೀಡಿದ್ದಾರೆ. ಬಿಡುಗಡೆಗೂ ಮೊದಲೇ ಚಿತ್ರರಂಗದ ಪ್ರೋತ್ಸಾಹ ಹಾಗೂ ಸಿನಿಪ್ರಿಯರು ತೋರುತ್ತಿರುವ ಪ್ರೀತಿ ಕನ್ನೇರಿ ಚಿತ್ರತಂಡಕ್ಕೆ ಅತೀವ ಸಂತಸವನ್ನುಂಟು ಮಾಡಿದೆ. ಅಂದಹಾಗೆ ಕಾಣದ ಊರಿಗೆ ಕೂಲಿಗೆ ಹೊರಟೋಳೆ ಹಾಡಿಗೆ ಕೊಟಿಗಾನಹಳ್ಳಿ ರಾಮಯ್ಯ ಚೆಂದದ ಸಾಹಿತ್ಯ ರಚಿಸಿದ್ದು ಇಂದು ನಾಗರಾಜ್ ಮತ್ತು ಸರಿಗಮಪ ಖ್ಯಾತಿಯ ಕೀರ್ತನ್ ಹೊಳ್ಳ ಹಾಡಿಗೆ ದನಿಯಾಗಿದ್ದಾರೆ. ಇದನ್ನೂ ಓದಿ : ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ
Advertisement
Advertisement
ನೀನಾಸಂ ಮಂಜು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕೊಟಿಗಾನಹಳ್ಳಿ ರಾಮಯ್ಯ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗೂ ಕ್ಷೀರ ಸಾಗರ ಅವರ ಜೇನು: ಆಕಾಶದ ಅರಮನೆ ಕಾದಂಬರಿ ಸ್ಪೂರ್ತಿಯೊಂದಿಗೆ ಹೆಣೆಯಲಾದ ಈ ಚಿತ್ರದಲ್ಲಿ ನಿರ್ವಸತಿಗರ ನೋವಿನ ಕಥೆಯಿದೆ, ನೆಲೆ ಹುಡುಕ ಹೊರಟ ಹೆಣ್ಣು ಮಗಳೊಬ್ಬಳ ವ್ಯಥೆ ಇದೆ. ಇದೆಲ್ಲವನ್ನು ಸಿನಿಮ್ಯಾಟಿಕ್ ಆಗಿ ಕಮರ್ಶಿಯಲ್ ಎಳೆಯಲ್ಲಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ನೀನಾಸಂ ಮಂಜು. ಅರ್ಚನಾ ಮಧುಸೂದನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ್ ಒಳಗೊಂಡ ಅನುಭವಿ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
Advertisement
ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕ ಕನ್ನೇರಿ ಚಿತ್ರಕ್ಕಿದೆ. ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿರುವ ಈ ಚಿತ್ರ ಹಾಡುಗಳ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದು, ಪ್ರೇಕ್ಷಕರನ್ನು ಸಿನಿಮಾ ಮೂಲಕ ಸೆಳೆಯಲು ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ. ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್ ವಿಧಿವಶ