ಶಿವಮೊಗ್ಗ: ಒಂದು ಕೆಜಿ ಪ್ಲಾಸ್ಟಿಕ್ ಕೊಟ್ಟು, ಒಂದು ಕೆಜಿ ಅಕ್ಕಿ ತೆಗೆದುಕೊಳ್ಳಿ ಎಂದು ಶಿವಮೊಗ್ಗದಲ್ಲಿ ಇಂದು ವಾಸವಿ ಮಹಿಳಾ ಸಂಘದ ಸದಸ್ಯರು ಪ್ಲಾಸ್ಟಿಕ್ ಬಳಸದಂತೆ ಅಭಿಯಾನ ನಡೆಸಿದ್ದಾರೆ.
ಇಂದು ಎಲ್ಲೆಡೆ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಅವುಗಳನ್ನು ಹಸುಗಳು ಆಹಾರ ಎಂದು ಸೇವಿಸುತ್ತಿವೆ. ಪ್ಲಾಸ್ಟಿಕ್ ಹಸುಗಳ ಹೊಟ್ಟೆ ಸೇರಿದ ಪರಿಣಾಮ ಎಷ್ಟೋ ಮೂಕ ಪ್ರಾಣಿಗಳು ಬಲಿಯಾಗಿವೆ. ಆದ್ದರಿಂದ ಶಿವಮೊಗ್ಗದಲ್ಲಿ ವಾಸವಿ ಮಹಿಳಾ ಸಂಘದ ಸದಸ್ಯರು ವಿನೂತನವಾಗಿ ಒಂದು ಕೆಜಿ ಪ್ಲಾಸ್ಟಿಕ್ ಕೊಡಿ, ಅದಕ್ಕೆ ಪ್ರತಿಯಾಗಿ ಒಂದು ಕೆಜಿ ಅಕ್ಕಿ ಪಡೆದುಕೊಳ್ಳಿ ಎಂಬ ಕಾರ್ಯಕ್ರಮ ನಡೆಸಿದರು.
Advertisement
Advertisement
ಈ ಮೂಲಕ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಹಾಗು ಪ್ಲಾಸ್ಟಿಕ್ ಬಳಸುವುದರಿಂದ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಿದರು. ಈ ಅಭಿಯಾನದಿಂದ ಒಂದೇ ದಿನಕ್ಕೆ ಬರೋಬ್ಬರಿ 150 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿದ್ದು, ಅದಕ್ಕೆ ಪ್ರತಿಯಾಗಿ ಮಹಿಳಾ ಸದಸ್ಯರು 150 ಕೆಜಿ ಅಕ್ಕಿ ನೀಡಿದ್ದಾರೆ. ಹಾಗೆಯೇ ತಮ್ಮ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿರುವುದಕ್ಕೆ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.