– ದರ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರು: ಶುಕ್ರವಾರ ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ (Varamahalakshmi) ಹಬ್ಬದ ಪ್ರಯುಕ್ತ ಹಬ್ಬಕ್ಕೆ ಜನರ ತಯಾರಿ ಜೋರಾಗಿದೆ. ಹಣ್ಣು, ಹೂಗಳು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳೋಕೆ ಜನ ಮಾರ್ಕೆಟ್‌ಗಳತ್ತ ಮುಖ ಮಾಡಿದ್ದಾರೆ. ಹೂವು, ಹಣ್ಣಿನ ರೇಟ್ ಡಬಲ್ ಇದ್ರೂ ಜನರ ಖರೀದಿ ಭರಾಟೆ ಜೋರಾಗಿದೆ.
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಜನರು ಸಾಲು ಸಾಲು ಹಬ್ಬಗಳ ಆಚರಣೆಯಲ್ಲಿ ಬ್ಯುಸಿಯಾಗುತ್ತಾರೆ. ಅದರಂತೆ ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ವರಮಹಾಲಕ್ಷ್ಮಿ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಗ್ರಾಹಕರು ಬೆಂಗಳೂರಿನ (Bengaluru) ಕೆಆರ್ ಮಾರುಕಟ್ಟೆಯತ್ತ (KR Market) ಲಗ್ಗೆ ಇಡುತ್ತಿದ್ದಾರೆ. ಹಣ್ಣು, ತರಕಾರಿ ಮತ್ತು ಹೂವುಗಳ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಹೂವಿನಂಗಡಿ, ಹಣ್ಣಿನಂಗಡಿ, ತರಾಕಾರಿ ಅಂಗಡಿಗಳು, ಗ್ರಂಥಿಗೆ ಅಂಗಡಿಗಳಲ್ಲಿ ಜನರು ತುಂಬಿ ತುಳುಕುತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಮೊದಲಿಗಿಂತಲೂ ಡಬಲ್ ಆಗಿದೆ. ಸೇಬು, ದಾಳಿಂಬೆ, ಬಟಾಣಿ, ಹುರುಳಿಕಾಯಿ, ಮುಂತಾದ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಹೂವುಗಳ ಬೆಲೆಯೂ ಅಧಿಕವಾಗಿದ್ದು, ಹೂವುಗಳನ್ನು ಕೊಳ್ಳೋ ಅಷ್ಟರಲ್ಲೇ ಜೇಬು ಖಾಲಿಯಾಗುತ್ತದೆ. ಕಳೆದ ವಾರದ ದರಕ್ಕೆ ಹೋಲಿಸಿದ್ರೆ ಈ ವಾರ ಎಲ್ಲಾ ವಸ್ತುಗಳ ರೇಟ್ ಡಬಲ್ ಆಗಿದೆ.
ಯಾವುದರ ದರ ಎಷ್ಟಿದೆ?
ತರಕಾರಿ – ಈಗಿನ ದರ – ಹಳೆ ದರ
ಹುರುಳಿಕಾಯಿ – 150 – 80
ಕ್ಯಾಪ್ಸಿಕಂ – 80 – 40
ಬೀನ್ಸ್ – 80 – 40
ಬದನೆಕಾಯಿ – 60 – 40
ಹೂಕೋಸು – 30 – 15
ತೊಂಡೆಕಾಯಿ – 45 – 30
ಹಣ್ಣುಗಳ ದರ ಎಷ್ಟಿದೆ?
ಹಣ್ಣುಗಳು – ಈಗಿನ ದರ – ಹಳೆ ದರ
ಸೇಬು – 300 – 180
ದಾಳಿಂಬೆ – 280 – 150
ಕಿತ್ತಳೆ – 200 – 120
ಮೂಸಂಬಿ – 150 – 70
ಸಪೋಟ – 150 – 100
ದ್ರಾಕ್ಷಿ – 200 – 150
ಸೀತಾಫಲ – 200 – 60
ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಬಂದ್:
ಇನ್ನು ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದ್ದರಿಂದಾಗಿ ಸಂಚಾರಿ ಪೊಲೀಸರು ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಕ್ಲೋಸ್ ಮಾಡಿದ್ದು, ಗ್ರಾಹಕರಿಗೆ ಅನೂಕೂಲ ಆಗುವಂತೆ ರಸ್ತೆ ಮಾರ್ಗ ಬದಲಿಸಿದ್ದಾರೆ. ಟೌನ್ ಹಾಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ, ಮೈಸೂರು ಸರ್ಕಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ ಬಂದ್ ಮಾಡಿದ್ದು, ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.