ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣದಲ್ಲಿ (Valmiki Development Corporation Case) ಬಂಧಿತ ಆರೋಪಿಗಳಾಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನ 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಎಸಿಎಂಎಂ ಕೋರ್ಟ್ (ACMM Court) ಆದೇಶಿಸಿದೆ.
ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಸಮಗ್ರ ತನಿಖೆ ನಡೆಸಲು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚಿಸಿತ್ತು. ತಂಡ ರಚನೆಯಾದ ಎರಡು ಗಂಟೆಗಳಲ್ಲೇ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನ ಎಸ್‌ಐಟಿ ಬಂಧಿಸಿ, ಆರೋಪಿಗಳನ್ನ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು.
ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಎಂಡಿ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಎಸ್ಕೇಪ್ ಆಗಿದ್ದರು. ಬೆಂಗಳೂರು ಹೊರವಲಯದಲ್ಲಿ ಅವರನ್ನು ಬಂಧಿಸಲಾಗಿತ್ತು. ಇಂದು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಎಸ್‌ಐಟಿ ತನ್ನ ಕಸ್ಟಡಿಗೆ ಪಡೆಯಿತು. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು
SIT ತಂಡದಲ್ಲಿ ಯಾರ‍್ಯಾರು ಇದ್ದಾರೆ?
ಎಸ್‌ಐಟಿಗೆ ಮುಖ್ಯಸ್ಥರಾಗಿ ಮನೀಶ್ ಖರ್ಬೀಕರ್‌ರನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು, ರಾಜ್ಯ ಗುಪ್ತ ವಾರ್ತೆ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸಿಐಡಿ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ. ಹೆಗಡೆ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.
ಏನಿದು ಪ್ರಕರಣ?
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಡೆತ್‌ನೋಟ್ ಬರೆದಿಟ್ಟು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 85 ಕೋಟಿ ರೂ. ಹಗರಣ ನಡೆದಿದೆ, ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ತನಿಖಾ ತಂಡ