ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.
ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.
Advertisement
Advertisement
ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv