ಈ ದಿನವನ್ನು ಯಾವ ಪ್ರೇಮಿಗಳು ಮರೆಯುವುದುಂಟೇ…? ಪ್ರೇಮಿಗಳ ದಿನಾಚರಣೆ ಬಂದರೆ ಬಹಳಷ್ಟು ಮಂದಿ ಪ್ರೇಮಿಗಳು ಹೇಗೆ ಈ ದಿನವನ್ನು ಸ್ಪೆಷಲ್ ಆಗಿ ಆಚರಿಸಬಹುದು ಎನ್ನುವ ಯೋಚನೆ ಮಾಡುವುದು ಸಹಜ. ಪ್ರೀತಿಸುವವರಿಗೆ ತಮ್ಮ ಸಮಯವನ್ನು ತನ್ನ ಸಂಗಾತಿಯೊಂದಿಗೆ ಕಳೆಯಲು ಇದೊಂದು ವಿಶೇಷ ದಿನವಾದರೂ, ನಿಜವಾದ ಪ್ರೇಮಿಗಳಿಗೆ ಪ್ರತಿದಿನವೂ ಅವರದೇ ದಿನ.. ಆಲ್ವಾ? ಏನಂತೀರಿ?
ಪ್ರೀತಿಯನ್ನು ಕವಿಗಳು, ಪ್ರೇಮಿಗಳು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಆದರೆ ವಾಸ್ತವ ಬದುಕಿನಲ್ಲಿ ಪ್ರೀತಿಯ ವ್ಯಾಖ್ಯಾನವೇ ಬೇರೆ… ಇತ್ತೀಚಿನ ಹದಿಹರೆಯದವರು ಪ್ರೀತಿಸುವ ಬಗೆಯನ್ನು ನೋಡಿದರೆ ನಿಜವಾಗಿ ಆತಂಕವಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಹುಟ್ಟಿದ ಪ್ರೀತಿ, ಮುಂದೆ ಪ್ರಾಯ ಪ್ರಬುದ್ಧರಾದಾಗ ಇರುವುದಿಲ್ಲ. ಇಲ್ಲಿ ಎಲ್ಲರೂ ಹಾಗೆಯೇ ಎಂದೇನಿಲ್ಲ.. ಹದಿಹರೆಯದಲ್ಲಿ ಮೂಡಿದ ಪ್ರೀತಿಯ ಮೊಗ್ಗು ಬಾಳಸಂಗಾತಿಯಾಗಿ ಸಂತೋಷವಾಗಿ ಇರುವವರು ಬಹಳಷ್ಟು ಮಂದಿ ಇದ್ದಾರೆ. ಇದನ್ನೂ ಓದಿ: ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!
ಆದರೆ ಇತ್ತೀಚಿಗಿನ ಯುವಜನತೆ ಪ್ರೀತಿ ಎಂಬ ಪದವನ್ನು ಬಹಳ ತಪ್ಪಾಗಿ ಅರ್ಥೈಯಿಸಿ ಕೊಳ್ಳುತ್ತಿದ್ದಾರೆ. ಇನ್ಸ್ಟಾ, ಫೇಸ್ಬುಕ್‌ನಲ್ಲಿ ಪರಿಚಯವಾದ ಪ್ರೀತಿ, ಇನ್ನೆಲ್ಲೋ ಕ್ಷುಲ್ಲಕ ಕಾರಣಕ್ಕೆ ಮುರಿದು ಬೀಳುತ್ತದೆ. ಇಬ್ಬರ ನಡುವಿನ ಆಕರ್ಷಣೆಯನ್ನು, ಓಲೈಸುವುದನ್ನೋ, ಮುದ್ದು ಮಾಡುವುದನ್ನೋ ಪ್ರೀತಿ-ಪ್ರೇಮ ಎನ್ನುವ ಭಾವನೆ ಇದೆ. ಏನಿದ್ದರೂ, ಇದೆಲ್ಲಾ ಕೇವಲ ಕ್ಷಣಿಕ ಅಷ್ಟೇ.
ಇಂದಿನ ಯುವಜನತೆಗೆ ಪ್ರಬುದ್ಧ ಪ್ರೀತಿಯ ಅರಿವೇ ಇಲ್ಲ… ಪ್ರೀತಿ ಅಂದ್ರೆ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದು.. ಪರಸ್ಪರ ಬೆಂಬಲಕ್ಕೆ ನಿಲ್ಲುವುದು, ಹೊಂದಾಣಿಕೆ, ತ್ಯಾಗ. ಬಹಳ ಮುಖ್ಯವಾಗಿ ಪರಸ್ಪರ ಗೌರವಿಸುವುದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?
ಈಗಿನ ಪ್ರೀತಿ ಹೇಗಿದೆ .. ಬರ್ತಡೇ ನೆನಪಿಲ್ಲ ಎಂದರೆ ಬ್ರೇಕಪ್, ಗಿಪ್ಟ್ ಕೊಟ್ಟಿಲ್ಲ, ಕೇಕ್ ತಂದಿಲ್ಲ, ಇದು ಅತಿರೇಕವಾಗಿ ಜಗಳಮಾಡಿಕೊಂಡು ಅದ್ಯಾವ ಮಟ್ಟಕ್ಕೆ ತಲುಪುತ್ತೋ ಊಹಿಸಲೂ ಅಸಾಧ್ಯ. ಪ್ರಬುದ್ಧ ಪ್ರೀತಿಯಲ್ಲಿ ಇದೆಲ್ಲ ಕ್ಷುಲ್ಲಕ ಕಾರಣವಷ್ಟೆ. ಪ್ರೀತಿ ಒಮ್ಮೆ ಮಾತ್ರ ಆಗುತ್ತೋ..ಅಥವಾ ಪದೇ ಪದೇ ಆಗುತ್ತೋ.. ಒಂದು ರೀತಿ ಚಂಚಲ ಮನಸ್ಸು ಈಗಿನ ಹದಿಹರೆಯದವರದ್ದು.
ಫೇಸ್‌ಬುಕ್, ಇನ್ಸ್ಟಾದಲ್ಲಿ ಪರಿಚಯವಾಗಿ ಒಟ್ಟಿಗೆ ಪಾರ್ಕ್ ಸುತ್ತಿ, ಸಿನಿಮಾ ನೋಡಿ, ರಾತ್ರಿ ಇಡಿ ಮೆಸೇಜ್ ಮಾಡಿ ದಿನಗಳು ಕಳೆದು ಹೋಗುತ್ತಿವೆ. ಇಷ್ಟೆಲ್ಲ ಆಗಿ ಇಬ್ಬರು ಹತ್ತಿರವಾಗುವ ಮೊದಲೇ ಬ್ರೇಕಪ್ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಟಿನೇಜ್ ಹುಡುಗ ಹುಡುಗಿಯರ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲಿ ಕಾಣುವ ಕಾಲ್ಪನಿಕ ಕತೆಗಳು ಒಬ್ಬರನ್ನೊಬ್ಬರನ್ನು ಅಮಾನುಷವಾಗಿ ಕೊಲ್ಲುವ ಮಟ್ಟಿಗೆ ಹೋಗಿ ತಲುಪುತ್ತದೆ ಎಂದರೆ, ಪರಿಣಾಮವನ್ನು ನಾವು-ನೀವು ಊಹಿಸಬಹುದು. ಪ್ರೀತಿ ಪ್ರೇಮದ ಅಮಲಿನಲ್ಲಿ ಬಿದ್ದು ತಪ್ಪು ಹೆಜ್ಜೆ ಇಟ್ಟು, ಮೊಗ್ಗು ಅರಳುವ ಮುನ್ನವೇ ಮಸಣದ ಹಾದಿ ಹಿಡಿದಿರುವುದನ್ನು ನೋಡಿದ್ದೇವೆ. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!
ಪ್ರೀತಿ ಮಾಡಿ ಕೊನೆಗೆ ಮನೆಯವರ ಒಪ್ಪಿಗೆ ಇಲ್ಲದೆ ಬೇರೆ ದಾರಿಹಿಡಿದಿದ್ದೂ ಇದೆ. ಪ್ರಾಯ ಪ್ರಬುದ್ಧರಾದ ಮಕ್ಕಳಿಗೆ ಕಿವಿ ಮಾತನ್ನು ಪೋಷಕರೂ ಕೊಡಬೇಕಾಗಿರುವುದು ಇಂದಿನ ಅನಿವಾರ್ಯತೆ ಕೂಡ. ಯಾವುದು ಆಕರ್ಷಣೆ.. ಯಾವುದು ನಿಜವಾದ ಪ್ರೀತಿ ಎಂಬುದನ್ನು ತಿಳಿಸಬೇಕು.
ಅಮ್ಮನ ಮಮತೆಯಲ್ಲಿ ಹೇಗೆ ಮುಗ್ಧ ನಿಷ್ಕಲ್ಮಶವಾಗಿರುತ್ತೋ..ಅದೇ ರೀತಿ ಪ್ರೀತಿಯಲ್ಲೂ ಇರಬೇಕು. ಈಗಿನ ಕಾಲೇಜು ಹುಡುಗ ಹುಡುಗಿಯರ ನಡುವೆ ಹುಟ್ಟುವ ಪ್ರೀತಿ ಕೇವಲ ಆಕರ್ಷಣೆಗೆ ಸೀಮಿತವಾಗಿದೆ. ಪ್ರೀತಿಗೆ ಯಾವುದೇ ಜಾತಿ-ಭೇದವಿಲ್ಲ ನಿಜ.. ಆದರೆ ಅಂಧವಲ್ಲ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ಹಾಗಾಗಿ ಪ್ರೀತಿ- ಪ್ರೇಮ ಕೇವಲ ಎರಡಕ್ಷರದ ಪದಗಳಲ್ಲಿ ಮುಗಿದು ಹೋಗಬಾರದು. ವರ್ಷ ಪೂರ್ತಿ ನೆನಪಿಟ್ಟುಕೊಳ್ಳುವ ಸಂಭ್ರಮದ ದಿನ ಆಗಿರಬೇಕು. ಸಿ.ಅಶ್ವಥ್ ಹಾಡಿದ ‘ಹಿಂದೆ ಹೇಗೆ ಚಿಮ್ಮುತಿತ್ತು…ಕಣ್ಣ ತುಂಬ ಪ್ರೀತಿ ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ’ ಈ ಹಾಡು ಹೆಚ್ಚು ಪ್ರಸ್ತುತ ಕಾಲಕ್ಕೆ ಹೆಚ್ಚು ಸಹ್ಯವೆನಿಸುತ್ತದೆ.. ಪ್ರಬುದ್ಧ ಪ್ರೇಮಿಗಳಿಗೆ ಪ್ರತಿದಿನವೂ ವ್ಯಾಲೆಂಟೈನ್ಸ್ ಡೆ… ಇದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.. ಒಬ್ಬರಿಗೊಬ್ಬರು ಅರಿತು ಬಾಳುವುದು ಜೀವನ…