– ಎಷ್ಟೇ ಪ್ರಯತ್ನ ಪಟ್ರೂ ಕಸಬು ಬಿಡೋಕೆ ಆಗ್ತೀಲ್ಲ ಅಂದ ಆರೋಪಿ
ಗಾಂಧಿನಗರ್: 20 ವರ್ಷಗಳಲ್ಲಿ 1,500 ಬೈಕ್‍ಗಳನ್ನು ಎಗರಿಸಿದ್ದ ಮೋಸ್ಟ್ ವಾಂಟೆಡ್ ಕಳ್ಳನನ್ನು ಗುಜರಾತ್‍ನ ಗೋಧ್ರಾ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅರವಿಂದ್ ಕುಮಾರ್ ಜಯಂತಿಲಾಲ್ ವ್ಯಾಸ್ (50) ಬಂಧಿತ ಆರೋಪಿ. ಬೈಕ್ ಮೇಲೆ ಗೋಧ್ರಾ ನಗರದಲ್ಲಿ ಸುತ್ತಾಡುತ್ತಿದ್ದ ವ್ಯಾಸ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.
Advertisement
ಇಲ್ಲಿಯವರೆಗೆ ಎಷ್ಟು ಬೈಕ್ ಕಳ್ಳತನ ಮಾಡಿದ್ದೀಯಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಯಾವುದೇ ತಪ್ಪನ್ನು ಮುಚ್ಚಿಡದೆ ವ್ಯಾಸ್ ನೀಡಿದ್ದ ಅಂಕಿ-ಸಂಖ್ಯೆ ಕೇಳಿ ಪೊಲೀಸರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರಂತೆ. ಕಳೆದ 20 ವರ್ಷಗಳಲ್ಲಿ ನಾನು 1,500 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದೇನೆ. ಈ ಕಸಬನ್ನು ಕೈಬಿಡಲು ಪ್ರಯತ್ನಿಸಿದರೂ ಆಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
Advertisement
Advertisement
ಈ ಹಿಂದೆಯು ವ್ಯಾಸ್ ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದ. ಆದರೆ ದೀಪಾವಳಿ ವೇಳೆ ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದ. ಬಳಿಕವೂ ತನ್ನ ಕೈಚಳಕವನ್ನು ಮುಂದುವರಿಸಿದ್ದ ವ್ಯಾಸ್, ಜೈಲಿನಿಂದ ಬಂದ ಮೇಲೆ 19 ಬೈಕ್‍ಗಳನ್ನು ಕಳ್ಳತನ ಮಾಡಿದ್ದಾನೆ. ಅವುಗಳನ್ನು ವಶಕ್ಕೆ ಪಡೆದು ವ್ಯಾಸ್‍ನನ್ನು ಬಂಧಿಸಿದ್ದೇವೆ ಎಂದು ಗೋಧ್ರಾ ಡಿಎಸ್‍ಪಿ ಆರ್.ಐ.ದೇಸಾಯಿ ತಿಳಿಸಿದ್ದಾರೆ.
Advertisement
ಮದ್ಯದ ಚಟಕ್ಕೆ ಒಳಗಾಗಿರುವ ವ್ಯಾಸ್‍ಗೆ ಇಬ್ಬರು ಪತ್ನಿಯರಿದ್ದಾರೆ. ಆದರೆ ಮಕ್ಕಳಾಗಿಲ್ಲ. ವಡೋದರಾ ನಗರ ವ್ಯಾಪ್ತಿಯಲ್ಲಿಯೇ ಹೆಚ್ಚಾಗಿ ವ್ಯಾಸ್ ತನ್ನ ಕೈಚಳಕ ತೋರಿಸುತ್ತಿದ್ದ. ಕದ್ದು ತಂದ ಬೈಕ್‍ಗಳನ್ನು ಬಿಚ್ಚಿ ಬಿಡಿಭಾಗಗಳನ್ನು ವ್ಯಾಸ್ ಮಾರಾಟ ಮಾಡುತ್ತಿದ್ದ ಎಂದು ದೇಸಾಯಿ ಹೇಳಿದ್ದಾರೆ.
ಎಲ್ಲ ರೀತಿಯ ಬೈಕ್ ಗಳಿಗೆ ಬರುವಂತೆ ವಿವಿಧ ಬಗೆಯ ಕೀಗಳನ್ನು ವ್ಯಾಸ್ ಹೊಂದಿದ್ದ. ವಾಹನಗಳು ಹೆಚ್ಚಾಗಿ ನಿಲ್ಲುತ್ತಿದ್ದ ಜಾಗಕ್ಕೆ ತೆರಳಿ. ಯಾವ ವಾಹನಕ್ಕೆ ಕೀ ಸರಿಹೋಗುತ್ತದೇಯೋ ಅದನ್ನು ಎಗರಿಸುತ್ತಿದ್ದ ಎಂದು ಡಿಎಸ್‍ಪಿ ಮಾಹಿತಿ ನೀಡಿದ್ದಾರೆ.
ಎಷ್ಟೋ ಬಾರಿ ನಾನು ಕಳ್ಳತನ ಮಾಡಬಾರದು ಅಂತ ನಿರ್ಧಾರ ಮಾಡಿದ್ದೆ. ಆದರೆ ಸಮಾಜ ಮಾತ್ರ ನನ್ನನ್ನು ಒಳ್ಳೆಯವನಾಗಿ ಇರಲು ಬಿಡುತ್ತಿಲ್ಲ. ಹೀಗಾಗಿ ನಾನು ಮತ್ತೆ ಬೈಕ್ ಕಳ್ಳತನಕ್ಕೆ ಇಳಿದುಬಿಟ್ಟೆ ಎಂದು ಬಂಧಿತ ಆರೋಪಿ ವ್ಯಾಸ್ ಹೇಳಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv