ಮಡಿಕೇರಿ: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಮತ್ತು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಸಾವಿರಾರು ಸಂತ್ರಸ್ತರ ಪೈಕಿ 35 ಜನರಿಗೆ ಕೊನೆಗೂ ಸ್ವಂತ ಸೂರು ಸೇರುವ ಭಾಗ್ಯ ಕೂಡಿ ಬಂದಿದೆ.
ಕಳೆದ ವರ್ಷದ ಭೂಕುಸಿತದಲ್ಲಿ 1,040 ಜನರು ಮನೆ ಕಳೆದುಕೊಂಡಿದ್ದರು. 1,040 ಮನೆಗಳ ಪೈಕಿ ಕೇವಲ 35 ಮನೆಗಳ ಕಾಮಗಾರಿ ಮಾತ್ರವೇ ಪೂರ್ಣಗೊಂಡಿದ್ದು, ಅವುಗಳನ್ನು ನಾಳೆ (ಶುಕ್ರವಾರ) ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಸಂತ್ರಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕೂಡ ಸಾಥ್ ನೀಡಲಿದ್ದಾರೆ.
Advertisement
Advertisement
ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಮತ್ತು ಪ್ರವಾಹದಲ್ಲಿ ಸಾವಿರಾರು ಮನೆಗಳು ನೆಲಸಮವಾಗಿದ್ದವು. ಸರ್ಕಾರ ಕೂಡಲೇ ಮನೆ ನಿರ್ಮಿಸಿ ಕೊಡುವುದಾಗಿ ಸಂತ್ರಸ್ತ ಕುಟುಂಬಗಳಿಗೆ ಭರವಸೆ ನೀಡಿತ್ತು. ಆದರೆ ಮನೆಗಳನ್ನು ಕಳೆದುಕೊಂಡು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದರೂ ಸಂತ್ರಸ್ತರಿಗೆ ಸೂರು ಸೇರುವ ಭಾಗ್ಯ ಕೂಡಿ ಬಂದಿಲ್ಲ. ಮನೆ ಕಳೆದುಕೊಂಡವರಿಗಾಗಿ ಜಿಲ್ಲೆಯ ಕರ್ಣಂಗೇರಿ, ಜಂಬೂರು, ಗಾಳಿಬೀಡು, ಮದೆನಾಡು ಮತ್ತು ಬಿಳಿಗೇರಿಯಲ್ಲಿ ಒಟ್ಟು 840 ಮನೆಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿತ್ತು. ವಿಪರ್ಯಾಸವೆಂದರೆ ಇದುವರೆಗೆ ಕರ್ಣಂಗೇರಿಯಲ್ಲಿ ಮಾತ್ರ 35 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯಿಂದ ಮನೆ ಸಿದ್ಧಗೊಂಡಿದೆ.
Advertisement
Advertisement
ಈ ಹಿಂದೆ ಇದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮನೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು. 10 ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ್ದ ಸರ್ಕಾರ ಕೊನೆಗೂ ಒಂದು ವರ್ಷ ಎರಡು ತಿಂಗಳ ಬಳಿಕ ಕೇವಲ 35 ಮನೆಗಳನ್ನು ನಿರ್ಮಿಸಿದೆ. ಇನ್ನೂ ಗಾಳಿ ಬೀಡು, ಜಂಬೂರು, ಮದೆನಾಡು ಮತ್ತು ಬಿಳಿಗೇರಿಗಳಲ್ಲಿ ಸಂತ್ರಸ್ತರಿಗಾಗಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಮನೆ ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ.
ವರ್ಷದ ಹಿಂದೆ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಇನ್ನೂ ಸ್ವಂತ ಸೂರು ಸೇರುವ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಕೆಲವರಿಗಾದರೂ ಮನೆಗಳು ಸಿಗುತ್ತಿವೆ, ಸಂತ್ರಸ್ತರಿಗೆ ನಾಳೆ ಮನೆಗಳು ಹಸ್ತಾಂತರ ಮಾಡಲಾಗುತ್ತಿದೆ. ಇದು ಖುಷಿಯ ವಿಚಾರವಾಗಿದೆ. ಬಾಕಿ ಉಳಿದ ಮನೆಗಳ ಕಾಮಗಾರಿ ಅದಷ್ಟು ಬೇಗ ಮುಗಿಸಿ ಸರ್ಕಾರ ಉಳಿದ ಸಂತ್ರಸ್ತರಿಗೆ ಮನೆ ನೀಡಲಿ ಎಂಬುವುದು ಕೊಡಗು ಹಾಗೂ ರಾಜ್ಯದ ಜನರ ಆಶಯವಾಗಿದೆ.