ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಅವರು ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಭಾರತೀಯರ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನವನದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನಡೆದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯೋತ್ಸವ ಹಾಗೂ ಪರಾಕ್ರಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಶ್ರಮಿಸಿದ ನೇತಾಜಿ ಅವರ ಜೀವನದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಭಾರತವನ್ನು ಬ್ರಿಟಿಷ್ ಮುಕ್ತನ್ನಾಗಿಸಿ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ತಮ್ಮದೇ ಆದ ಉಪಾಯಗಳನ್ನು ಹೂಡಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೊದಲ ಬಾರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಅಲ್ಲಿ ತಿರಂಗಾ ಹಾರಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ತಿಳಿಸಿದರು.
Advertisement
Advertisement
ನೇತಾಜಿ ಅವರ ಸಂದೇಶಗಳು ಇಂದಿಗೂ ಅನುಕರಣೀಯ. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇಂಥ ಅನೇಕರ ತ್ಯಾಗ ಮತ್ತು ಬಲಿದಾನದಿಂದ ನಾವೆಲ್ಲ ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಘೋಷಿಸಿದ್ದಾರೆ. ಅಪ್ರತಿಮ ನಾಯಕರೊಬ್ಬರ ಪುತ್ಥಳಿ ನಿರ್ಮಿಸುವುದರ ಬಗ್ಗೆ ಹೇಳಿದ ಅವರಿಗೆ ಭಾರತ ಋಣಿಯಾಗಿದೆ. ನೇತಾಜಿ ಅವರ ಸ್ಮರಣೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೇತಾಜಿ ಅವರ ಹೆಸರಿನ ಉದ್ಯಾನವನ ನಿರ್ಮಿಸಿ ಅವರ ಪುತ್ಥಳಿ ಸ್ಥಾಪಿಸುವ ಮೂಲಕ ಅಪ್ರತಿಮ ವೀರನಿಗೆ ಋಣಿಯಾಗಿದ್ದೇವೆ. ಇನ್ನು ಮುಂದಿನ ನೇತಾಜಿ ಜಯಂತ್ಯೋತ್ಸವದ ವೇಳೆಗೆ ಅವರ ನುಡಿಗಳ- ಸಾಧನೆಗಳ ಬಗ್ಗೆ ಪುಸ್ತಕ ಹೊರತಂದು ಲಕ್ಷಕ್ಕೂ ಅಧಿಕ ಜನತೆಗೆ ಉಚಿತವಾಗಿ ಹಂಚುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
Advertisement
Advertisement
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಮಾತನಾಡಿ, ನೇತಾಜಿ ಅವರ ಮೇಲೆ ಬಹುಮುಖ್ಯವಾಗಿ ಪ್ರಭಾವ ಬೀರಿದವರು ಸ್ವಾಮಿ ವಿವೇಕಾನಂದರು. ಮಹಾತ್ಮ ಗಾಂಧಿ ಅವರಿಗೆ ನೇತಾಜಿ ಅವರ ಅಪ್ರತಿಮ ಶಕ್ತಿಯ ಬಗ್ಗೆ ಅದಮ್ಯ ನಂಬಿಕೆಯಿತ್ತು. ಆದರೆ ಗಾಂಧಿಯವರದ್ದು ಶಾಂತಿಪಥ, ನೇತಾಜಿಯವರದ್ದು ಕ್ರಾಂತಿಪಥ. ಸ್ವಾತಂತ್ರ್ಯ ಗಳಿಸಲು ರಕ್ತವನ್ನು ಬೇಕಿದ್ದರೂ ಕೊಡುತ್ತೇನೆ. ಸ್ವಾತಂತ್ರ‍್ಯ ಪುಕ್ಕಟೆಯಾಗಿ ದೊರಕುವುದಲ್ಲ ಎಂದು ಹೇಳುವುದರ ಮೂಲಕ ದೇಶದ ಜನತೆಯನ್ನು ನೇತಾಜಿ ಬಡಿದೆಬ್ಬಿಸಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ
ಕಾರ್ಯಕ್ರಮದಲ್ಲಿ ನೇತಾಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ನಿವೃತ್ತ ಸೈನಿಕರಾದ ಧನಂಜಯ್ ಮತ್ತು ಕೃಷ್ಣಗೌಡರವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ವಿ.ಸೋಮಣ್ಣ ಪ್ರತಿಷ್ಠಾನದ ಕೋಶಾಧ್ಯಕ್ಷ ಡಾ.ನವೀನ್ ಸೋಮಣ್ಣ, ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡರು, ಹಿರಿಯ ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರ ಪಾಲನೇತ್ರ, ನಿಕಟಪೂರ್ವ ಬಿಬಿಎಂಪಿ ಸದಸ್ಯ ಶಿಲ್ಪ ಶ್ರೀಧರ್, ಶ್ರೀಧರ್, ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ