– ಗ್ಯಾಂಗ್ ವೈಷಮ್ಯ ಶಂಕೆಯಲ್ಲಿ ತನಿಖೆ
ಕರಾಚಿ: ಪಾಕಿಸ್ತಾನದ (Pakistan) ಕರಾಚಿಯಲ್ಲಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಉಜೈರ್ ಬಲೂಚ್ (Uzair Baloch) ಸಹೋದರ ಜುಬೈರ್ ಬಲೂಚ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಈ ಘಟನೆಯಲ್ಲಿ ಜುಬೈರ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ದಾರಿಹೋಕರೂ ಗಾಯಗೊಂಡಿದ್ದಾರೆ.
ಈ ಘಟನೆ ಕರಾಚಿಯ ಲಿಯಾರಿ ಪ್ರದೇಶದಲ್ಲಿ ನಡೆದಿದೆ. ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಜುಬೈರ್ ಬಲೂಚ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಜುಬೈರ್‌ನ ಎದೆ ಮತ್ತು ಹೊಟ್ಟೆಗೆ ಹಲವು ಗುಂಡುಗಳು ತಗುಲಿದ್ದು, ಆತನನ್ನು ತಕ್ಷಣ ಕರಾಚಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ದಾರಿಹೋಕರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಜುಬೈರ್ ಬಲೂಚ್ 2012ರಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತನಾಗಿದ್ದ. ನಂತರ 2025ರ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ‘ರಾಮಾಯಣ’ ಟ್ರೈಲರ್ ರಿಲೀಸ್ ಬೆನ್ನಲ್ಲೇ ಹತ್ತು ತಲೆ ರಾವಣನ ಮುಂದೆ ರಾಧಿಕಾ ಪಂಡಿತ್ ಪೋಸ್!
ಈ ದಾಳಿಯ ಹಿಂದೆ ಗ್ಯಾಂಗ್ ವೈಷಮ್ಯವಿದೆಯೇ? ಅಥವಾ ವೈಯಕ್ತಿಕ ದ್ವೇಷ ಕಾರಣವೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಲ್ಲದೆ, ಜುಬೈರ್ ಇತ್ತೀಚೆಗೆ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದ ಎನ್ನಲಾಗಿದ್ದು, ಕೆಲ ತಿಂಗಳ ಹಿಂದೆ ಲಿಯಾರಿ ಪ್ರದೇಶದಲ್ಲಿ ಪಕ್ಷದ ಧ್ವಜಗಳನ್ನು ಹಾಕಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ.
ಅಮೆರಿಕ-ಇರಾನ್ ಯುದ್ಧದ ಬಳಿಕ ಹಲವು ಕುಖ್ಯಾತ ಗ್ಯಾಂಗ್ ಸದಸ್ಯರು ಮತ್ತೆ ಕರಾಚಿಗೆ ಮರಳಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದರಿಂದ ಲಿಯಾರಿ ಪ್ರದೇಶದಲ್ಲಿ ಮತ್ತೆ ಗ್ಯಾಂಗ್ ಹಿಂಸಾಚಾರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ತೊರೆದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ
