ಬಳ್ಳಾರಿ: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಹಂಪಿಗೂ ಅವಿನಾಭಾವ ಸಂಬಂಧವಿದೆ. ಹಂಪಿಗೆ ಅವರು ಭೇಟಿ ನೀಡದಿದ್ದರೂ ಘರ್‍ವಾಪ್ಸಿ ಕಾರ್ಯಕ್ರಮಕ್ಕೆ ಹಂಪಿಯೇ ಮೂಲ ಪ್ರೇರಣೆಯಂತೆ.
ಹಂಪಿಯ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ನೀಡಿದ ಪ್ರವಚನದಿಂದ ಪ್ರೇರಣೆ ಪಡೆದು ಯೋಗಿ ಆದಿತ್ಯನಾಥ್ ಅವರು ಘರ್ ವಾಪ್ಸಿ ಕಾರ್ಯಕ್ರಮ ರೂಪಿಸಿದ್ದರಂತೆ.
Advertisement
ಕ್ರಿ.ಶ. 1336ರಲ್ಲಿ ಶ್ರೀ ವಿದ್ಯಾರಣ್ಯರಿಂದ ಪ್ರೇರಣೆ ಪಡೆದ ಹಕ್ಕ-ಬುಕ್ಕ ಸಹೋದರರು ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು. ಅದಕ್ಕೂ ಮುನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಅವರನ್ನು ಹಿಂದೂ ಧರ್ಮಕ್ಕೆ ಪುನಃ ಬರಮಾಡಿಕೊಳ್ಳಲಾಗಿತ್ತು ಎಂಬುದನ್ನು ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಹಿಂದೂ ಆಚಾರ್ ಸಭಾದಲ್ಲಿ ಪ್ರವಚನ ನೀಡಿದ್ದರು. ಈ ಪ್ರವಚನದಿಂದ ಆದಿತ್ಯಾನಾಥ್ ಪ್ರೇರಣೆ ಪಡೆದಿದ್ದರು ಎಂದು ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದ್ದಾರೆ.
Advertisement
2004ರಿಂದಲೂ ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿರುವ ಯೋಗಿ ಆದಿತ್ಯನಾಥರು ಹಂಪಿಗೆ ಖುದ್ದು ಭೇಟಿ ನೀಡುವ ಇಚ್ಛೆಯನ್ನು ಹಿಂದೊಮ್ಮೆ ವ್ಯಕ್ತಪಡಿಸಿದ್ದರು. ಆದರೆ ಅವರು ಇದುವರೆಗೆ ಹಂಪಿಗೆ ಭೇಟಿ ನೀಡಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಹಿಂದೂ ಆಚಾರ್ ಸಭಾದಲ್ಲಿ ಶ್ರೀಗಳಿಂದ ಧರ್ಮ, ಸಂಸ್ಕೃತಿ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಾರೆ. ಜತೆಗೆ ದಕ್ಷಿಣ ಭಾರತದ ಕಾಶಿ ಹಂಪಿ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತೀವ ಕುತೂಹಲವನ್ನು ಹೊಂದಿದ್ದಾರೆ.
Advertisement
ಚೆನ್ನೈ, ಹೈದರಾಬಾದ್, ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಹಾಗೂ ಗೋವಾದಲ್ಲಿ ನಡೆದ ಹಿಂದೂ ಆಚಾರ್ ಸಭಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರೊಂದಿಗೆ ಹಿಂದೂ ಧರ್ಮದ ಕುರಿತು ಚರ್ಚಿಸಿದ್ದಾರೆ. ಈ ಮೂಲಕ ಕೆಲ ಸಲಹೆಯನ್ನು ಪಡೆದುಕೊಂಡಿದ್ದಾರೆ.
Advertisement
ಬಡವರನ್ನು ಮೇಲಕ್ಕೆ ತರುವ ಮೂಲಕ ಹಿಂದೂ ಧರ್ಮವನ್ನು ರಕ್ಷಿಸುವ ಕನಸನ್ನು ಆದಿತ್ಯನಾಥ್ ಹೊಂದಿದ್ದಾರೆ. ಯೋಗ ಯಾವ ಬಗೆಯಲ್ಲಿ ವಿಶ್ವ ಮಾನ್ಯತೆ ಪಡೆಯಿತೋ ಅದರಂತೆ ಹಿಂದೂ ಸಂಸ್ಕೃತಿಯ ಪ್ರತಿ ಆಚರಣೆಯೂ ಮನ್ನಣೆ ಪಡೆಯಬೇಕೆಂಬ ಸದುದ್ದೇಶವನ್ನು ಯೋಗಿ ಆದಿತ್ಯನಾಥ್ ಹೊಂದಿದ್ದಾರೆ ಎಂದು ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಆದಿತ್ಯಾನಾಥ್ ಅವರನ್ನು ಹೊಗಳುತ್ತಾರೆ.