ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ರತಾಲ್‌ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 9 ಚಾರಣಿಗರು (Bengaluru Trekkers) ಸಾವಿಗೀಡಾಗಿದ್ದಾರೆ. ಇನ್ನುಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಕ್ಷಿಸಲ್ಪಟ್ಟ ಚಾರಣಿಗರು ಬೆಂಗಳೂರು ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್ 1ಗೆ ಬಂದಿಳಿದಿದ್ದಾರೆ. ಚಾರಣಿಗರು ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದನ್ನೂ ಓದಿ: ಹಿಮಗಾಳಿ ಬಳಿಕ ಎಲ್ಲೆಡೆ ಕಗ್ಗತ್ತಲು, ತಿಂದಿದ್ದು ಡ್ರೈಪ್ರೂಟ್ಸ್ ಮಾತ್ರ!
ಸಾವಿನ ಕೂಪದಂತಿದ್ದ ಸಹಸ್ರತಾಲ್‌ನ ಹಿಮದ ಹೊದಿಕೆಯಿಂದ ಬಚಾವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ ಚಾರಣಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಏನಾಗಿತ್ತು?
ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡರ್ ಒಳಗೊಂಡ ತಂಡವು ಮೇ 28 ರಂದು ಟ್ರೆಕ್ಕಿಂಗ್‌ಗೆ ಉತ್ತಾರಖಂಡಕ್ಕೆ ಹೋಗಿತ್ತು. ಉತ್ತರಾಕಾಶಿಯಿಂದ 35 ಕಿಮೀ ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭಿಸಿದ್ದರು. ಚಾರಣದ ಗಮ್ಯಸ್ಥಾನ ತಲುಪಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಹಿಮಗಾಳಿಯಿಂದಾಗಿ ಚಾರಣಿಗರು ಅಪಾಯಕ್ಕೆ ಸಿಲುಕಿದರು. ಇದನ್ನೂ ಓದಿ: ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್
ಭೀಕರ ಹಿಮಗಾಳಿಯಿಂದಾಗಿ ಕರ್ನಾಟಕದ 9 ಚಾರಣಿಗರು ದಾರುಣ ಸಾವನ್ನಪ್ಪಿದ್ದಾರೆ. ಉಳಿದ ಚಾರಣಿಗರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ಕರ್ನಾಟಕದ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಉತ್ತರಾಖಂಡಕ್ಕೆ ತೆರಳಿದ್ದರು. ಅಪಾಯದಿಂದ ಬದುಕುಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲಾಗಿದೆ.