ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿನೋದ್ ಆರ್ಯ (Vinod Arya) ಅವರ ಪುತ್ರ ಪುಲ್ಕಿತ್ ಆರ್ಯನನ್ನು (Pulkit arya) ಬಂಧಿಸಲಾಗಿದೆ.
ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್ ಠಾಣೆಯಲ್ಲಿ ಪುಲ್ಕಿತ್ ಆರ್ಯ ದೂರು ದಾಖಲಿಸಿದ್ದರು. ಆದರೆ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ. ಯುವತಿ ಕುಟುಂಬದವರು ಪುಲ್ಕಿತ್ ಆರ್ಯನ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿತ್ತು. ಇದನ್ನೂ ಓದಿ: 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?
ಮೃತದೇಹವು ರೆಸಾರ್ಟ್‌ನ ನೀರಿನ ಕೊಳದಲ್ಲಿ ಪತ್ತೆಯಾಗಿದೆ. ರೆಸಾರ್ಟ್ ಬಳಿಯ ನೀರಿನ ಚಾನಲ್‌ನಲ್ಲಿ ಹುಡುಕಾಟ ನಡೆಯುತ್ತಿದೆ. ಆರೋಪಿಯ ತಂದೆ ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಿನ್ನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ನಮಗೆ ವರ್ಗಾಯಿಸಿದೆ. ನಾವು ಅದನ್ನು 24 ಗಂಟೆಗಳಲ್ಲಿ ಪರಿಹರಿಸಿದ್ದೇವೆ. ರೆಸಾರ್ಟ್ ಮಾಲೀಕ ಮತ್ತು ಇತರ ಇಬ್ಬರು ಆರೋಪಿಗಳು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿದಾಗ ಪ್ರತಿಭಟನಾನಿರತ ಸ್ಥಳೀಯರು ಪೊಲೀಸರ ವಾಹನವನ್ನು ಸುತ್ತುವರಿದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಲು ಕೂಡ ಮುಂದಾದರು.
ಆರೋಪಿಗಳು ಆರ್‌ಎಸ್‌ಎಸ್, ಬಿಜೆಪಿ ಜೊತೆಗಿನ ಸಂಬಂಧದಿಂದಾಗಿ ಪೊಲೀಸರು ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಭಯಾನಕ ಕೃತ್ಯವಾಗಿದೆ. ಸೆಪ್ಟೆಂಬರ್ 18 ರಂದು ಹುಡುಗಿ ಕಾಣೆಯಾದರೆ, ಸೆಪ್ಟೆಂಬರ್ 21 ರಂದು ಪೊಲೀಸರು ಎಫ್ಐಆರ್ ಅನ್ನು ಏಕೆ ದಾಖಲಿಸಿದರು? ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಈ ನಿರ್ಲಜ್ಜ ಅಧಿಕಾರ ದುರುಪಯೋಗ ಎಲ್ಲಿಯವರೆಗೆ ಮುಂದುವರಿಯುತ್ತದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಗರಿಮಾ ಮೆಹ್ರಾ ದಸೌನಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ನಕಲಿ ಡಾಕ್ಟರ್ ಹಾವಳಿ- 10ನೇ ತರಗತಿ ಫೇಲ್ ಆದವ್ರು ಇಲ್ಲಿ ವೈದ್ಯರು
ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಅತ್ಯಂತ ದುಃಖಕರ ಘಟನೆ, ಘೋರ ಅಪರಾಧ. ಪೊಲೀಸರು ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.