ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಂದ ಬೆಂಗಳೂರಿಗೆ ವಾಪಸ್ ಆಗಿದ್ದು, ಶನಿವಾರ ದೆಹಲಿಗೆ ತೆರಳಿ ಸಂಪುಟ ರಚನೆಯ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಲಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಯಾವ ಯಾವ ಕ್ಷೇತ್ರಗಳಲ್ಲಿ ಅತಿವೃಷ್ಠಿಯಾಗಿದೆ ಅಂತ ಸರ್ವೇ ಮಾಡಲಾಗಿದೆ. ಶುಕ್ರವಾರ ಮಳೆ ಕಮ್ಮಿಯಾಗಿದ್ದು, ರಕ್ಷಣಾ ಕಾರ್ಯ ನಡೆದಿದೆ. ಜಮೀನು, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಇದನ್ನು ಓದಿ: ಮೊದಲು ಪ್ರವಾಹ ಪರಿಸ್ಥಿತಿ ನಿಭಾಯಿಸಿ, ಆಮೇಲೆ ಸಂಪುಟ ರಚನೆ ಮಾತು – ಬಿಎಸ್‍ವೈಗೆ ಶಾ ಸೂಚನೆ
ಪರಿಹಾರ ಕೇಂದ್ರದಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಶನಿವಾರ ಭೇಟಿ ನೀಡಲಿದ್ದಾರೆ. ಕೊಡಗು ಜಿಲ್ಲೆಗೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ. ಆದರೆ ನಾನು ಅವರೊಂದಿಗೆ ಕೊಡಗು ಜಿಲ್ಲೆಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದರು.
ಗದಗ್‍ನಲ್ಲಿ ನಿರಾಶ್ರಿತರ ಮೇಲೆ ಲಾಠಿ ಚಾರ್ಜ್ ವಿಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಆ ವಿಚಾರ ಗಮನಕ್ಕೆ ಬಂದಿದೆ. ಹಾಗೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಬಿದ್ದರೆ ಅವರ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಅವರು ಶನಿವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಲಿಸಲಿದ್ದಾರೆ. ಶನಿವಾರ ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾನುವಾರ ಹಾಗೂ ಸೋಮವಾರ ಹೈಕಮಾಂಡ್ ಭೇಟಿಯಾಗಿ ಸಚಿವರ ಫೈನಲ್ ಲಿಸ್ಟ್ ಹಿಡಿದು ರಾಜ್ಯಕ್ಕೆ ಬರಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.