ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಂದ 25 ಕೆ.ಜಿ. ಪಂಚಲೋಹ ವಿಗ್ರಹ ಸೇರಿದಂತೆ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ತಾಲೂಕಿನ ಕಲಗಾರಿನ ಮುನ್ನಾ ದಾವುದ್ ಸಾಬ್ (32), ಬದನಗೋಡಿನ ಸಂತೋಷ ಬೋವಿವಡ್ಡರ್ (22), ಗಡಳ್ಳಿ ಕ್ರಾಸಿನ ಮಹಮ್ಮದ್ ಶರೀಫ್ ಅಬ್ದುಲ್ ಖುದ್ದುಸ್ (47), ಬನವಾಸಿಯ ಲಕ್ಷ್ಮೀಕಾಂತ ನಿರಂಜನ ಒಡೆಯರ್ (30), ಹಾಡಲಗಿಯ ಮಂಜುನಾಥ ಕೊರವರ ಹಾಗೂ ಚಿಕ್ಕಬಳ್ಳಾಪುರದ ಗಾಂಧಿನಗರ ಚಿಂತಾಮಣಿಯ ಇಮ್ರಾನ್ ಪಾಶಾ ರಶೂಲ್ ಸಾಬ್ ಬಂಧಿತ ಆರೋಪಿಗಳು.
Advertisement
Advertisement
ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ನಿಧಿ ಶೋಧನೆಗಾಗಿ ಬಳಸುವ ಮೆಟಲ್ ಡಿಟೆಕ್ಟರ್, 25 ಕೆಜಿ ಪಂಚ ಲೋಹದ ವಿಗ್ರಹ, 6.5 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಆಭರಣ ಹಾಗೂ 90 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಮೂರು ಬೈಕ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಬಂಧಿತ ಆರೋಪಿಗಳು ಕಳೆದ ಅಕ್ಟೋಬರ್ ನಲ್ಲಿ ಶಿರಸಿ ಸಮೀಪದ ಶಿಗೇಹಳ್ಳಿಯ ಒಂಟಿ ಮನೆಯ ಸಾವಿತ್ರಿ ಎಂಬವರ ಮೇಲೆ ಹಲ್ಲೆ ಮಾಡಿ ಕಳ್ಳತನ ಮಾಡಿದ್ದರು. ಬನವಾಸಿ ಬಳಿಯ ಹಾಡಲಗಿಯಲ್ಲಿ ಕಳ್ಳತನ, ಅಜ್ಜರಣಿ ದೇವಸ್ಥಾನ ಕಳ್ಳತನ ಮಾಡಿದ್ದರು. ಈ ಮೂರು ಪ್ರಕರಣದಲ್ಲಿ ಕಳುವಾಗಿದ್ದ ವಸ್ತುಗಳನ್ನು ಆರೋಪಿಗಳಿಂದ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
Advertisement
ಆರೋಪಿಗಳು ಶಿರಸಿ ಹಾಗೂ ಬನವಾಸಿ ಸುತ್ತಮುತ್ತ ನಿಧಿಗಾಗಿ ಅನೇಕ ದೇವಸ್ಥಾನದಲ್ಲಿ ಶೋಧನೆ ನಡೆಸಿದ್ದರು. ಈ ಸಂಬಂಧ ಬನವಾಸಿಯ ಬ್ಯಾಗದ್ದೆಯ ಶ್ರೀ ಶಂಕರನಾರಾಯಣ ದೇವಸ್ಥಾನ, ಕಪ್ಪಗುಡ್ಡೆಯ ಈಶ್ವರ ದೇವಸ್ಥಾನ, ಶಿರಸಿ ಗ್ರಾಮಾಂತರ ಪ್ರದೇಶದ ವಾಣಿ ವಿಘ್ನೇಶ್ವರ ದೇವಸ್ಥಾನ ಹಾಗೂ ಕೆ.ಎಚ್.ಬಿ.ಕಾಲೋನಿಯ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದರು. ಅಷ್ಟೇ ಅಲ್ಲದೆ ಬನವಾಸಿ ಮಧುಕೇಶ್ವರ ದೇವಸ್ಥಾನದ ಒಳಗಡೆಯಿಂದ ಭಾರೀ ಗಾತ್ರದ ಗಂಧದ ಮರವನ್ನು ಕಡಿದು ಸಾಗಿಸಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.