ಕಾರವಾರ: 2017ರಲ್ಲಿ ನಡೆದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಕರಾವಳಿಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ ಬರಲು ಕಾರಣವಾದ ಪರೇಶ್ ಮೇಸ್ತಾ ಘಟನೆ ಬಿಜೆಪಿಗೆ ರಾಜ್ಯದಲ್ಲಿ ಅತೀ ಹೆಚ್ಚು ಮತ ಬರಲು ಕಾರಣವಾಗಿತ್ತು.
ಹಿಂದುತ್ವದ ಹೆಸರು ಹೇಳಿಕೊಂಡು ಪರೇಶ್ ಮೇಸ್ತಾ ಸಾವಿಗೆ ಕಾರಣರಾದವರನ್ನು ಶಿಕ್ಷಿಸುತ್ತೇವೆ ಎಂದು ಹೇಳಿಕೊಂಡಿದ್ದ ಬಿಜೆಪಿ ಇದೀಗ ಪರೇಶ್ ಮೇಸ್ತಾ ಪ್ರಕರಣದಲ್ಲಿ ಆರೋಪಿಯಾದವನಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನವನ್ನು ನೀಡಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಅಜಾದ್ ಅಣ್ಣಿಗೇರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಇದೀಗ ಜಿಲ್ಲೆಯಲ್ಲಿ ಬಿಜೆಪಿ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ
ಸಚಿವೆ ಶಶಿಕಲಾ ಜೊಲ್ಲೆಯಿಂದ ಆಯ್ಕೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಕುದ್ದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಜಾದ್ ಅಣ್ಣಿಗೇರಿಯನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆ ಬಳಿಕ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ವಕ್ಫ್ ಬೋರ್ಡ್ ಪದಾಧಿಕಾರಿಗಳನ್ನು ಬದಲಿಸುವಂತೆ ಸಚಿವರಿಗೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಅನೀಸ್ ಪತ್ರ ಬರೆದಿದ್ದು ಈತನನ್ನು ಆಯ್ಕೆ ಮಾಡಿದ್ದರಿಂದ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಗಾಗಿ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ಬದಲಿಸುವಂತೆ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ