ಕಾರವಾರ: ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಸಂಸದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ ಪ್ರಸಂಗ ಇಂದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯಿತು.
ಚಿಗಳ್ಳಿ ಚೆಕ್ ಡ್ಯಾಂ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು, ಸರ್ ನಮ್ಮ ಗ್ರಾಮಕ್ಕೆ ಬಂದು ಪರಿಸ್ಥಿತಿ ನೋಡಿ. ಚಿಗಳ್ಳಿ ಚೆಕ್ ಡ್ಯಾಂ ಒಡೆದು ಜಮೀನು, ಮನೆ ಎಲ್ಲವೂ ನೀರು ಪಾಲಾಗಿದೆ. ಬದುಕು ತುಂಬಾ ಕಷ್ಟವಾಗಿದೆ ಎಂದು ಮನವಿ ಮಾಡಿಕೊಂಡರು. ಆಗ ಸಂಸದರು, ನಾನು ಬರುವುದು ಮುಖ್ಯವಲ್ಲ ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಜಾರಿಕೊಂಡರು.
Advertisement
Advertisement
ಅನಂತ್‍ಕುಮಾರ್ ಹೆಗಡೆ ಅವರ ಮಾತಿನಿಂದ ಕೋಪಗೊಂಡ ಗ್ರಾಮಸ್ಥರು ಸಂಸದರನ್ನು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದರು. ಆದರೆ ಅನಂತ್‍ಕುಮಾರ್ ಹೆಗಡೆ ಅವರು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು, ವೋಟ್ ಕೇಳುವಾಗ ನಾವು ಬೇಡ ಅಂದ್ರೂ ಕಾಲು ಮುಗಿಯುತ್ತಾರೆ. ವೋಟ್‍ಗಾಗಿ ಏನ್ ಬೇಕಾದರೂ ಮಾಡುತ್ತಾರೆ. ಈಗ ಪ್ರವಾಹದಿಂದ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರಿಗೆ ಅರ್ಥವಾಗೊಲ್ವಾ? ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.
Advertisement
ಸಂಸದ ಅನಂತ್‍ಕುಮಾರ್ ಹೆಗಡೆ ಅವರು ನಿನ್ನೆಯಷ್ಟೇ ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದರು. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು.
Advertisement
ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದ್ದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದರು. ಆದರೆ ಸಂಸದರು ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಅನಂತ್‍ಕುಮಾರ್ ಹೆಗಡೆ ತೆರಳಿದ್ದರು.