ಲಕ್ನೋ: ಪ್ರೇಯಸಿ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು 23 ವರ್ಷದ ಯುವಕನೊಬ್ಬ ಉತ್ತರ ಪ್ರದೇಶದ ಮಹಾರಾಜ್‍ಗಾಂಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಶನಿವಾರ ನಡೆದಿದ್ದು, ಬಸಂತ್ಪುರ್ ಗ್ರಾಮದ ನಿವಾಸಿ ಕಿಶನ್ ಆರ್ಯ ಆತ್ಮಹತ್ಯೆ ಮಾಡಿಕೊಂಡ 23 ವರ್ಷದ ಯವಕ. ಈತ ಮಹಾರಾಜ್‍ಗಾಂಜ್‍ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಕಿಶನ್ ಮತ್ತು ಆತನ ಪ್ರೇಯಸಿ ಕೆಲ ದಿನಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ 11 ದಿನಗಳ ಹಿಂದೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಈ ಜಗಳದಿಂದ ಮುನಿಸಿಕೊಂಡ ಯುವತಿ ಕಿಶನ್‍ನನ್ನು ಬಿಟ್ಟು ಫರೆಂಡಾ ರಸ್ತೆಯಾಲ್ಲಿರುವ ತನ್ನ ಮನೆಗೆ ಬಂದಿದ್ದಾಳೆ. ಇದಕ್ಕೆ ಕೋಪಗೊಂಡ ಕಿಶನ್ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಕಿಶನ್ ಅವರ ಕುಟುಂಬಸ್ಥರ ಪ್ರಕಾರ ಯುವತಿಯ ಮನೆಯವರು ತಮ್ಮ ಮಗನನ್ನು ಕೊಲೆ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾರೆ. ಆದರೆ ಯುವತಿಯ ಮನೆಯವರು ನಮ್ಮ ಮನೆಗೆ ಕಿಶನ್ ಶನಿವಾರ ಬಂದು ಅವನ ಜೊತೆ ತಂದಿದ್ದ ಪೆಟ್ರೋಲ್ ಸುರಿದು ಕೊಂಡು ಅವನೇ ಬೆಂಕಿ ಹಚ್ಚಿಕೊಂಡಿದ್ದಾನೆ. ತಡೆಯಲು ಹೋದ ಯುವತಿಯ ತಂದೆಗೂ ಗಾಯವಾಗಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಕಿಶನ್ ಈ ಯುವತಿಯ ಜೊತೆಯಲ್ಲಿ ಓಡಿಹೋಗಿದ್ದ. ಆದರೆ ಹುಡುಗಿ ಅಪ್ರಾಪ್ತೆಯಾದ ಕಾರಣ ಯುವತಿಯ ತಂದೆ ದೂರು ನೀಡಿದ್ದರಿಂದ ಕಿಶನ್ ಜೈಲಿಗೆ ಹೋಗಿದ್ದನು. ಜೈಲಿನಿಂದ ಹೊರಬಂದ ಕಿಶನ್ ಮತ್ತೆ ಯುವತಿಯ ಜೊತೆ ಓಡಿಹೋಗಿ ಮದುವೆ ಮಾಡಿಕೊಂಡು ಅವಳ ಜೊತೆ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.