– ಸೆಕ್ಯೂರಿಟಿ ಗಾರ್ಡ್ ಎದುರಲ್ಲೇ ಆ್ಯಸಿಡ್ ಎರಚಿ ಪರಾರಿಯಾದ ದುಷ್ಕರ್ಮಿಗಳು
ಲಕ್ನೋ: ಒಂಬತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು 4 ನೇ ಬಾರಿ ಆ್ಯಸಿಡ್ ದಾಳಿ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
35 ವರ್ಷದ ಸಂತ್ರಸ್ತೆಯ ಮೇಲೆ ಶನಿವಾರ ರಾತ್ರಿ ಸುಮಾರು 8 ರಿಂದ 9 ಗಂಟೆಯೊಳಗೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದು, ಸದ್ಯ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಏನಿದು ಪ್ರಕರಣ?: ಸಂತ್ರಸ್ತೆ ಲಕ್ನೋದ ಆಲಿಗಂಜ್ ಪ್ರದೇಶಲ್ಲಿರೋ ಹಾಸ್ಟೆಲ್‍ನಲ್ಲಿ ವಾಸವಾಗಿದ್ದು, ಶನಿವಾರ ರಾತ್ರಿ ನೀರು ತರಲೆಂದು ಹೊರಬಂದಿದ್ದ ವೇಳೆ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ ಎದುರಲ್ಲೇ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.
Advertisement
ಘಟನೆಯಿಂದ ಆಕೆಯ ಮುಖದ ಬಲಭಾಗಕ್ಕೆ ಹಾನಿಯಾಗಿದ್ದು, ತಕ್ಷಣವೇ ಆಕೆಯನ್ನು ಲಕ್ನೋದಲ್ಲಿರೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಗೆ ದಾಖಲಿಸಿಲಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಭಯ್ ಕುಮಾರ್ ಪ್ರಸಾದ್ ತಿಳಿಸಿದ್ದಾರೆ. ಪ್ರಕರಣ ಬಗ್ಗೆ ಈವರೆಗೆ ದೂರು ದಾಖಲಿಸಿಕೊಂಡಿಲ್ಲ. ಆಕೆಯ ಕುಟುಂಬ ದೂರು ದಾಖಲಿಸಲು ಕಾಯುತ್ತಿದ್ದೇವೆ ಅಂತಾ ಪೊಲೀಸರು ಹೇಳಿದ್ದಾರೆ.
Advertisement
Advertisement
ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಯ್ ಬರೇಲಿಯಲ್ಲಿರುವ ತನ್ನ ಗ್ರಾಮದಿಂದ ಲಖನೌಗೆ ರೈಲಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಒತ್ತಾಯಿಸಿ ಆ್ಯಸಿಡ್ ಕುಡಿಸಿದ್ದರು. ಪರಿಣಾಮ ಆಕೆಯ ಕುತ್ತಿಗೆ ಭಾಗಕ್ಕೆ ಹಾನಿಯಾಗಿತ್ತು. ಘಟನೆಯ ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಬಿದ್ದಿರುವುದನ್ನು ಕಂಡು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಅವರು ಆಸ್ಪತ್ರೆಗೆ ತೆರಳಿ ಮಹಿಳೆ ಸಾಂತ್ವನ ಹೇಳಿದ್ದರು. ಅಲ್ಲದೇ ಪರಿಹಾರ ಕೂಡ ನೀಡಿದ್ದರು. ಪ್ರಕರಣ ಕುರಿತು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.
ಪ್ರಸ್ತುತ 2 ಮಕ್ಕಳ ತಾಯಿಯಾಗಿರುವ ಮಹಿಳೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, 2008ರಲ್ಲಿ ಆಕೆಯ ಗ್ರಾಮದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ಇಂದಿಗೂ ನಡೆಯುತ್ತಿದೆ. ಆ ಬಳಿಕ 2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. 2013ರಲ್ಲಿ ಮತ್ತು ಇದೇ ವರ್ಷದ ಮಾರ್ಚ್ ತಿಂಗಳಲ್ಲಿಯೂ ಆ್ಯಸಿಡ್ ದಾಳಿಯಾಗಿತ್ತು.
ನಿನ್ನೆ ಮತ್ತೆ ಅದೇ ಮಹಿಳೆಯ ಮೇಲೆ ಆ್ಯಸಿಡ್ ದಾಳಿಯಾಗಿರುವುದರಿಂದ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನ ಕಳೆದರೂ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಒಟ್ಟಿನಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಕಿಡಿಕಾರಿದ್ದಾರೆ.
ಇದೀಗ ಮತ್ತೆ ನಾಲ್ಕನೇ ಬಾರಿ ದಾಳಿ ಮಾಡಲಾಗಿದ್ದು, ಮಹಿಳೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳೇ ಈ ದಾಳಿ ನಡೆಸಿರಬಹುದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.