ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಿಶ್ಯಬ್ಧವಾಗಿದ್ದ ಪೊಲೀಸರ ಬಂದೂಕುಗಳು ಸದ್ದು ಮಾಡಿದ್ದು, ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್ ನಡೆದಿವೆ.
ವಿವಿಧ ಪ್ರಕರಣಗಳ ಬೇಕಾಗಿದ್ದ ಆರೋಪಿಗಳ ಮೇಲೆ ಜೂನ್ ತಿಂಗಳಲ್ಲಿಯೇ 30 ಎನ್‍ಕೌಂಟರ್ ನಡೆಸಲಾಗಿದೆ. ಇದರಲ್ಲಿ 15 ಎನ್‍ಕಂಟರ್ ಗಳು ಕಳೆದ ನಾಲ್ಕು ದಿನಗಳಲ್ಲಿ ನಡೆದಿದ್ದು, ಮೂವರು ಹತ್ಯೆಯಾಗಿದ್ದಾರೆ. ಉಳಿದಂತೆ 12ಕ್ಕೂ ಹೆಚ್ಚು ಆರೋಪಿಗಳನ್ನು ಗಾಯಗೊಂಡಿದ್ದು, ಇಬ್ಬರು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 77 ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ 1,100 ಜನರು ಗಾಯಗೊಂಡಿದ್ದಾರೆ.
Advertisement
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರವು ಕಳೆದ ಮಾರ್ಚ್ ಗೆ ಎರಡು ವರ್ಷ ಪೂರೈಸಿತ್ತು. ಈ ಹಿನ್ನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ನಮ್ಮ ಅಧಿಕಾರವಧಿಯಲ್ಲಿ 3,500ಕ್ಕೂ ಹೆಚ್ಚು ಎನ್‍ಕೌಂಟರ್ ಮಾಡಲಾಗಿದೆ. ಈ ಮೂಲಕ ಎಂಟು ಸಾವಿರ ಆರೋಪಿಗಳನ್ನು ಬಂಧಿಸಲಾಗಿದ್ದು, ಒಂದು ಸಾವಿರ ಕ್ರಿಮಿನಲ್‍ಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.
Advertisement
ಕ್ರಿಮಿನಲ್‍ಗಳ ಬಂಧನ ಹಾಗೂ ಎನ್‍ಕೌಂಟರ್ ಪ್ರಕರಣಗಳು ದಿಢೀರ್ ಹೆಚ್ಚಾಗಿವೆ ಎಂಬ ಆರೋಪವನ್ನು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ರಾಮಶಾಸ್ತ್ರಿ ತಳ್ಳಿಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಎನ್‍ಕೌಂಟರ್ ಗಳು ಯೋಜಿತವಾಗಿದ್ದಲ್ಲ. ಆರೋಪಿಗಳು ಬಂಧನವನ್ನು ವಿರೋಧಿಸುತ್ತಾರೆ. ಈ ವೇಳೆ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ಬಲ ಪ್ರಯೋಗ (ಎನ್‍ಕೌಂಟರ್) ಮಾಡುವ ಅವಕಾಶವಿದೆ. ರಾಜ್ಯದಲ್ಲಿ ಏಕಾಏಕಿ ಎನ್‍ಕೌಂಟರ್ ಗಳು ಹೆಚ್ಚಾಗಿವೆ ಎಂಬ ಆರೋಪಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.
ಬರಾಬಂಕಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳು ತಮ್ಮ ಬಂಧನ ವಿರೋಧಿಸಿ, ಪೊಲೀಸರು ನಿರ್ಮಿಸಿದ್ದ ತಡೆಗೋಡೆ ಹಾರಿದ್ದರು. ಬಳಿಕ ಆರೋಪಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಹೀಗಾಗಿ ಆ ಇಬ್ಬರು ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜುಬೆರ್ ಹಾಗೂ ಜೋಮಸ್ ಎನ್‍ಕೌಂಟರ್ ಗೆ ಬಲಿಯಾದ ಆರೋಪಿಗಳು. ಜುಬೆರ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 50ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಜುಬೆರ್ ಸುಳಿವು ನೀಡಿದವರಿಗೆ 75 ಸಾವಿರ ರೂ. ಘೋಷಣೆ ಮಾಡಲಾಗಿತ್ತು. ಜೋಮನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 45ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು. ಈತನ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.