ಕಾಯ್ದೆ ಜಾರಿಯಾದ್ರೆ ಕರ್ನಾಟಕ ಹೊತ್ತಿ ಉರಿಯುತ್ತದೆ: ಖಾದರ್ ವಿವಾದಾತ್ಮಕ ಹೇಳಿಕೆ

Public TV
2 Min Read
khadar

– ನಿರಾಶ್ರಿತರಿಗೆ ಪೌರತ್ವ ಕೊಡ್ತಿದ್ದೇವೆ, ಖಾದರ್ ಹಕ್ಕು ಕಿತ್ಕೊಂಡಿಲ್ಲ
– ಖಾದರ್ ಪಾಕಿಸ್ತಾನಕ್ಕೆ ಹೋಗಲಿ – ರವಿ ತಿರುಗೇಟು

ಮಂಗಳೂರು: ಹಿಂದೊಮ್ಮೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡಿ ಛೀಮಾರಿಗೆ ಒಳಗಾಗಿದ್ದರು. ಇದೀಗ ಮಾಜಿ ಸಚಿವ ಯು.ಟಿ.ಖಾದರ್ ಕೂಡ ಅದೇ ರೀತಿ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಸಿಲುಕಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪೌರತ್ವ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಸೂದೆ ವಿರೋಧಿಸಿ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. ಮಸೂದೆ ವಿಚಾರದಲ್ಲಿ ಇಡೀ ದೇಶ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ಮಾತ್ರ ಶಾಂತಿಯಿಂದಿದೆ. ಆದರೆ ರಾಜ್ಯದಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯಬಹುದು. ಇದು ಮುಖ್ಯಮಂತ್ರಿಗೆ ನೀಡುತ್ತಿರುವ ಎಚ್ಚರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress flag 2 e1573529275338

ಖಾದರ್ ಮಾತು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು. ರಾಜ್ಯಕ್ಕೆ ಬೆಂಕಿ ಹಚ್ಚಲು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ಟೀಕೆ ಕೇಳಿಬರುತ್ತಿದೆ. ಅಲ್ಲದೆ ಪ್ರಚೋದನಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ತಮ್ಮ ಹೇಳಿಕೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸ್ಪಷ್ಟಪಡಿಸಿದ ಖಾದರ್, ನಾನು ಯಾವುದೇ ಪ್ರಚೋದನಕಾರಿ ಹೇಳಿಕೆಯನ್ನು ನೀಡಿಲ್ಲ. ಪೌರತ್ವದ ವಿಚಾರದಲ್ಲಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿಯೂ ನಡೆಯಬಹುದು ಈ ಕುರಿತು ಮುಖ್ಯಮಂತ್ರಿಗಳು ಎಚ್ಚರದಿಂದಿರಬೇಕು ಎಂದು ಹೇಳಿದ್ದೇನೆ. ಅಲ್ಲದೆ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಸಿದ್ದಾಗಿ ಹೇಳಿದ್ದಾರೆ.

ಖಾದರ್ ಹೇಳಿಕೆ ಕುರಿತು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಯು.ಟಿ.ಖಾದರ್ ಅವರ ಬೆದರಿಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ. ಖಾದರ್ ನಮಗೆ ಬೆದರಿಸಲು ನಾವು ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಹೊತ್ತಿ ಉರಿಸೋದರಲ್ಲಿ ಖಾದರ್ ನಿಸ್ಸೀಮರು. ಖಾದರ್ ಮನಸ್ಥಿತಿಯಂಥವರೇ ಗೋದ್ರಾಗೆ ಬೆಂಕಿ ಹಾಕಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಹುಸಂಖ್ಯಾತರು ತಾಳ್ಮೆ ವಹಿಸಿದ್ದಾರೆ ಅಂತ ಬೆಂಕಿ ಹಾಕುವ ಬಗ್ಗೆ ಮಾತನಾಡುತ್ತೀರಿ. ಬಹುಸಂಖ್ಯಾತರು ರೊಚ್ವಿಗೆದ್ದರೆ ಏನಾಗುತ್ತೆ ಅಂತ ಖಾದರ್ ಅರ್ಥ ಮಾಡಿಕೊಳ್ಳಲಿ. ನಮ್ಮ ಸಹನೆ ನಮ್ಮ ದೌರ್ಬಲ್ಯ ಅಲ್ಲ. ಕಾಂಗ್ರೆಸ್ಸಿನವರು ಪಾಕಿಸ್ತಾನದವರಿಗೂ ಪೌರತ್ವ ಕೊಡಿ ಅಂತಿದಾರೆ. ನಾವು ಪಾಕಿಸ್ತಾನೀಯರಿಗೂ ಪೌರತ್ವ ಕೊಡಲು ಸಿದ್ಧ, ಆದರೆ ಆಗ ಅಖಂಡ ಭಾರತ ಆಗಬೇಕು. ಅಖಂಡ ಭಾರತ ಆದಾಗ ಪಾಕ್ ನ ಮುಸ್ಲಿಮರಿಗೂ ಪೌರತ್ವ ಕೊಡುತ್ತೇವೆ ಎಂದರು.

ckm c.t.ravi reaction WEB

ಅಖಂಡ ಭಾರತವಾಗುವವರೆಗೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುತ್ತಿದ್ದೇವೆ. ನಿರಾಶ್ರಿತರು ಬೇರೆ, ನುಸುಳು ಕೋರರು, ಆಕ್ರಮಣಕಾರರು ಬೇರೆ. ನಾವು ನಿರಾಶ್ರಿತರಿಗೆ ಪೌರತ್ವ ಕೊಡುತ್ತಿದ್ದೇವೆಯೇ ಹೊರತು ಖಾದರ್ ಹಕ್ಕನ್ನು ಕಿತ್ತುಕೊಂಡಿಲ್ಲ. ಪಾಕಿಸ್ತಾನದಿಂದ ಬಂದಿರುವ ಖಾದರ್ ನೆಂಟರಿಗೆ ಪೌರತ್ವ ಕೊಡಲ್ಲ. ಭಾರತವನ್ನು ಪಾಕಿಸ್ತಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೇ ಹೋಗಲಿ ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *