ಪೆಟ್ರೋಲ್‌ ಜೊತೆ E85 ಬಳಕೆ – ಪ್ರಯೋಜನಗಳೇನು? ವಾಹನಗಳ ಮೇಲೆ ಪರಿಣಾಮವೇನು?

5 Min Read

ಮೆರಿಕ-ಇರಾನ್‌ ನಡುವಿನ ಯುದ್ಧದಿಂದಾಗಿ ಭಾರತದ ಇಂಧನ ಭದ್ರತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಸಸ್ಯಜನ್ಯವಾದ ಎಥೆನಾಲ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿರುವ ಪೆಟ್ರೋಲ್‌ ಬಳಕೆಗೆ ಉತ್ತೇಜನ ನೀಡಲು ಮುಂದಾಗಿದೆ. ಈಗಾಗಲೇ 20% ಎಥೆನಾಲ್‌ ಮಿಶ್ರಣ ಮಾಡಿದ ಪೆಟ್ರೋಲ್‌ (ಇ20) ಬಳಕೆಯಲ್ಲಿದ್ದು, ಎಥೆನಾಲ್‌ ಮಿಶ್ರಣವನ್ನು 85%ಗೆ ಏರಿಸಲು ಕೇಂದ್ರ ಯೋಚಿಸಿದೆ.

ಪೆಟ್ರೋಲ್‌ ಮೇಲಿನ ಅವಲಂಬನೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಪರ್ಯಾಯ ಇಂಧನಗಳತ್ತ ದೃಷ್ಟಿನೆಟ್ಟಿದ್ದು, ಇದರಲ್ಲಿ ಇ85 ಇಂಧನವು ಮುಂಚೂಣಿಯಲ್ಲಿದೆ. ಈ ಕುರಿತಾದ ಹೊಸ ಕರಡು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಹಾಗಿದ್ರೆ ಇ85 ಬಳಕೆಯಿಂದ ಪ್ರಯೋಜನಗಳೇನು? ವಾಹನಗಳ ಮೇಲೆ ಇದರ ಪರಿಣಾಮವೇನು? ಇ85 ಎಥೆನಾಲ್‌ ಅಳವಡಿಕೆಯ ಮುಂದಿರುವ ಸವಾಲುಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಇ20 ಪೆಟ್ರೋಲ್:‌
ಕೇಂದ್ರದ ರಾಷ್ಟ್ರೀಯ ಜೈವಿಕ ಇಂಧನ ನೀತಿಯು ಸಸ್ಯಜನ್ಯ ಎಥೆನಾಲ್‌ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸಲು ಪ್ರೋತ್ಸಾಹ ನೀಡಿದೆ. ದೇಶದಲ್ಲಿ ಎರಡು ದಶಕಗಳಿಂದ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಸಲಾಗುತ್ತಿದೆ. ಮಿಶ್ರಣದ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತಿದೆ. 2008-2009ರಿಂದ ಈ ಪ್ರಕ್ರಿಯೆ ಆರಂಭಗೊಂಡಿದ್ದು, ಕಳೆದ ವರ್ಷದಿಂದ ಶೇ.20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಅನ್ನೇ ದೇಶಾದ್ಯಂತ ಪೂರೈಸಲಾಗುತ್ತಿದೆ. ಇ20 ಪೆಟ್ರೋಲ್ ನೀತಿ 2022ರಿಂದ ಜಾರಿಗೆ ಬಂದಿದೆ.

ಏನಿದು ಎಥೆನಾಲ್‌ 85 ಇಂಧನ?
ಇ85 ಎಂದರೆ ಶೇ.85ರಷ್ಟು ಎಥೆನಾಲ್‌ ಮತ್ತು ಕೇವಲ ಶೇ.15ರಷ್ಟು ಪೆಟ್ರೋಲ್‌ ಮಿಶ್ರಣವಾಗಿರುವ ಸ್ವತ್ಛ ಇಂಧನ. ಸದ್ಯ ಭಾರತದಾದ್ಯಂತ ಶೇ.20ರಷ್ಟುಎಥೆನಾಲ್‌ ಮಿಶ್ರಿತ (ಇ20) ಪೆಟ್ರೋಲ್‌ ಅನ್ನು ಕಡ್ಡಾಯವಾಗಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ಹಂತವಾಗಿ, ಪೆಟ್ರೋಲ್‌ ಬಳಕೆಯನ್ನು ಗಣನೀಯವಾಗಿ ತಗ್ಗಿಸಲು ಈ ಇ85 ಹಾಗೂ ಇ100 (ಸಂಪೂರ್ಣ ಎಥೆನಾಲ್‌) ಇಂಧನಗಳನ್ನು ಪರಿಚಯಿಸಲು ಕೇಂದ್ರ ಸರಕಾರವು ಚಿಂತನೆ ನಡೆಸುತ್ತಿದೆ.

ಶೇ.85ರಷ್ಟು ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ನ ಪರಿಕಲ್ಪನೆ ಹೊಸದೇನಲ್ಲ. ಅಮೆರಿಕ, ಯುರೋಪಿನ ಹಲವು ರಾಷ್ಟ್ರಗಳಲ್ಲಿ ಇದು ಈಗಾಗಲೇ ಬಳಕೆಯಲ್ಲಿದೆ. ಶೇ.100ರ ಎಥೆನಾಲ್‌ ಮಿಶ್ರಿತ ಅಂದರೆ ಇ100 ಪೆಟ್ರೋಲ್‌ ಅನ್ನು ಬಳಸುವ ರಾಷ್ಟ್ರಗಳಿವೆ. ಬ್ರೆಜಿಲ್‌ನಲ್ಲಿ ಇ100 ಪೆಟ್ರೋಲ್‌ ಬಳಸುವ ಕಾರುಗಳು ದೊಡ್ಡ ಸಂಖ್ಯೆಯಲ್ಲಿವೆ.

ಸಾಮಾನ್ಯ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಕಾರುಗಳಲ್ಲಿ ಈ ಪೆಟ್ರೋಲ್‌ ಅನ್ನು ಬಳಸಲು ಸಾಧ್ಯವಿಲ್ಲ. ಈ ಇಂಧನವನ್ನು ಬಳಸಲು ಪ್ರತ್ಯೇಕ ಎಂಜಿನ್‌ಗಳು ಬೇಕು. ಇವುಗಳನ್ನು ಫ್ಲೆಕ್ಸ್-ಫ್ಯೂಯೆಲ್ ಎಂಜಿನ್‌ ಎನ್ನಲಾಗುತ್ತದೆ. ಈ ಎಂಜಿನ್‌ಗಳು ಇ85, ಇ100 ಪೆಟ್ರೋಲ್‌ ಬಳಸುವ ಸಾಮರ್ಥ್ಯವನ್ನು ಹೊಂದಿದೆ.

ಇಂಧನ ಬೆಲೆ ಕಡಿತಕ್ಕೆ ಇ85 ಸಹಕಾರಿ:
ಒಟ್ಟು ಇಂಧನ ಬೇಡಿಕೆಯ ಪೈಕಿ ಶೇ.80ಕ್ಕೂ ಅಧಿಕ ಕಚ್ಚಾ ತೈಲವನ್ನು ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಭಾರೀ ಆರ್ಥಿಕ ಹೊರೆಯಾಗುತ್ತಿದೆ. ಎಥೆನಾಲ್‌ ಅನ್ನು ಕಬ್ಬು, ಮುಸುಕಿನ ಜೋಳ, ಹಾಳಾದ ಅಕ್ಕಿ ಮತ್ತು ಕೃಷಿ ತ್ಯಾಜ್ಯಗಳಿಂದ ಸಂಪೂರ್ಣವಾಗಿ ದೇಶೀಯವಾಗಿ ಉತ್ಪಾದಿಸ ಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪೆಟ್ರೋಲ್‌ ಬೆಲೆಗೆ ಹೋಲಿಸಿದರೆ ಎಥೆನಾಲ್‌ ಉತ್ಪಾದನ ವೆಚ್ಚವು ಕಡಿಮೆ. ಇದರಿಂದ ಸಹಜವಾಗಿಯೇ ಇಂಧನದ ಬೆಲೆ ಕಡಿಮೆಯಾಗುತ್ತದೆ.

ಆದರೆ, ಎಥೆನಾಲ್‌ನ ಶಕ್ತಿ ಸಾಂದ್ರತೆ (ಎನರ್ಜಿ ಡೆನ್ಸಿಟಿ) ಪೆಟ್ರೋಲ್‌ಗಿಂತ ಶೇ.30ರಷ್ಟು ಕಡಿಮೆ. ಹೀಗಾಗಿ ಇಂಧನದ ಬೆಲೆ ಅಗ್ಗವಾದರೂ, ವಾಹನದ ಮೈಲೇಜ್‌ ಕೂಡ ಕೊಂಚ ಕಡಿಮೆಯಾಗುತ್ತದೆ. ಆದಾಗ್ಯೂ, ಒಟ್ಟಾರೆ ಆರ್ಥಿಕತೆ, ತೆರಿಗೆ ಉಳಿತಾಯ ಮತ್ತು ವಿದೇಶಿ ವಿನಿಮಯದ ದೃಷ್ಟಿಯಿಂದ ಇದು ದೇಶಕ್ಕೆ ಹಾಗೂ ದೀರ್ಘಾವಧಿಯಲ್ಲಿ ಗ್ರಾಹಕರಿಗೂ ಆರ್ಥಿಕ ಲಾಭವನ್ನು ತರಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಹಳೇ ಪೆಟ್ರೋಲ್‌ ವಾಹನಗಳಿಗೆ ಇ85 ಸೂಕ್ತವಲ್ಲ:
ಇ85 ಇಂಧನದ ಬಳಕೆಗೆ ಸಾಮಾನ್ಯ ಪೆಟ್ರೋಲ್‌ ವಾಹನಗಳು ಸೂಕ್ತವಲ್ಲ. ಇದಕ್ಕಾಗಿ ʼಫ್ಲೆಕ್ಸ್‌ ಫ್ಯೂಯೆಲ್ಸ್‌ ಎಂಜಿನ್‌ʼ ತಂತ್ರಜ್ಞಾನದ ಅಗತ್ಯವಿದೆ. ʼಫ್ಲೆಕ್ಸ್‌ ಫ್ಯೂಯೆಲ್ಸ್‌ʼ ವಾಹನಗಳು ವಿಶೇಷವಾದ ಇಂಧನ ಸಂವೇದಕ (ಸೆನ್ಸರ್‌)ಗಳನ್ನು ಮತ್ತು ಸುಧಾರಿತ ಎಂಜಿನ್‌ ಕಂಟ್ರೋಲ್‌ ಯೂನಿಟ್‌ (ಇಸಿಯು) ಅನ್ನು ಹೊಂದಿರುತ್ತವೆ. ಈ ಸೆನ್ಸರ್‌ಗಳು ವಾಹನದ ಟ್ಯಾಂಕ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್‌ ಇದೆ ಎಂಬುದನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಇಂಧನವನ್ನು ದಹಿಸಲು ಎಂಜಿನ್‌ಗೆ ಸೂಚನೆ ನೀಡುತ್ತವೆ. ಇದರಿಂದಾಗಿ ಈ ವಾಹನಗಳು ಶೇ.0 ದಿಂದ ಶೇ.85ರ ವರೆಗಿನ ಯಾವುದೇ ಪ್ರಮಾಣದ ಎಥೆನಾಲ್‌ ಮಿಶ್ರಣವಿದ್ದರೂ ಸುಗಮವಾಗಿ ಓಡಬಲ್ಲವು.

ವಾಹನಗಳ ಮೇಲೆ ಪರಿಣಾಮ ಬೀರುತ್ತಾ?
ಇ85 ಅನ್ನು ʼಫ್ಲೆಕ್ಸ್‌ ಫ್ಯೂಯೆಲ್ಸ್‌’ ವಾಹನಗಳಲ್ಲಿ ಬಳಸಿದರೆ ಎಂಜಿನ್‌ನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂಬ ವಾದವಿದೆ. ಆದರೆ, ಇದನ್ನು ಕೆಲವರು ತಳ್ಳಿ ಹಾಕುತ್ತಾರೆ. ಎಂಜಿನ್‌ ಹಾಳಾಗುತ್ತದೆ ಎಂಬ ವಾದವನ್ನು ಮುಂದಿಡುತ್ತಾರೆ. ಎಥೆನಾಲ್‌ ಹೆಚ್ಚಿನ ಆಕ್ಟೇನ್‌ ರೇಟಿಂಗ್‌ ಹೊಂದಿದೆ. ಆದರೆ, ಸಾಮಾನ್ಯ ಕಾರು ಅಥವಾ ಬೈಕ್‌ಗಳಿಗೆ ಇ85 ಹಾಕಿದರೆ ಅದು ಅಪಾಯಕಾರಿ. ಎಥೆನಾಲ್‌ ನೀರನ್ನು ಸುಲಭವಾಗಿ ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಇದರಿಂದ ತುಕ್ಕು ಹಿಡಿಯುವ ಸಾಧ್ಯತೆಗಳು ಹೆಚ್ಚು. ಇದು ಸಾಮಾನ್ಯ ಇಂಧನ ಪಂಪ್‌, ರಬ್ಬರ್‌ ಪೈಪ್‌ಗಳು ಮತ್ತು ಇಂಜೆಕ್ಟರ್‌ಗಳನ್ನು ಕರಗಿಸುತ್ತದೆ. ಪರಿಣಾಮವಾಗಿ, ಎಂಜಿನ್‌ ನಾಕ್‌ ಆಗುವಿಕೆ (ಎಂಜಿನ್‌ನಿಂದ ಅಸಹಜ ಶಬ್ದ ಬರುವುದು) ಮತ್ತು ಸಂಪೂರ್ಣವಾಗಿ ಎಂಜಿನ್‌ ಸೀಝ್ (ವೈಫಲ್ಯ) ಆಗುವ ಸಾಧ್ಯತೆ ಹೆಚ್ಚಿದೆ.

ಭಾರತದಲ್ಲಿ ಎಥೆನಾಲ್‌ 85 ಪ್ರಯೋಜನಗಳೇನು?:
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆಮದು ಕಡಿತ:
ಕಚ್ಚಾ ತೈಲದ ಬೆಲೆ ಏರಿಳಿತಗಳಿಂದ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ತಪ್ಪಿಸಲು, ಪೆಟ್ರೋಲ್‌ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ. ಎಥೆನಾಲ್‌ 85ರ ಅನುಷ್ಠಾನದಿಂದ ತೈಲ ಆಮದು ವೆಚ್ಚದಲ್ಲಿ ವರ್ಷಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ʼಆತ್ಮನಿರ್ಭರ ಭಾರತʼ ಕನಸು ನನಸಾಗಲು ಇದು ದಾರಿ ಮಾಡಿಕೊಡಲಿದೆ.

ರೈತರಿಗೆ ಆರ್ಥಿಕ ವರದಾನ:
ಇದು ಕೃಷಿ ವಲಯವನ್ನು ಇಂಧನ ವಲಯದೊಂದಿಗೆ ನೇರವಾಗಿ ಬೆಸೆಯುತ್ತದೆ. ಎಥೆನಾಲ್‌ ಉತ್ಪಾದನೆಯಿಂದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಯುವ ಭಾರತೀಯ ರೈತರಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗಿ, ಅವರ ಆದಾಯ ದ್ವಿಗುಣಗೊಳ್ಳಲು ಸಹಾಯವಾಗುತ್ತದೆ.

ಪರಿಸರ ಸಂರಕ್ಷಣೆ:
ಇ85 ಇಂಧನವು ಶುದ್ಧವಾಗಿ ದಹಿಸುತ್ತದೆ. ಇದರ ಬಳಕೆಯಿಂದ ಕಾರ್ಬನ್‌ ಮೋನೋಕ್ಸೈಡ್ (ಸಿಒ) ಮತ್ತು ಹಸುರುಮನೆ ಅನಿಲಗಳ ಹೊರಸೂಸುವಿಕೆ ಶೇ.40-50ರಷ್ಟು ಕಡಿಮೆಯಾಗುತ್ತದೆ. ದಿಲ್ಲಿ, ಬೆಂಗಳೂರು, ಮುಂಬೈನಂಥ ಮಹಾನಗರಗಳಲ್ಲಿನ ವಾಯುಮಾಲಿನ್ಯವನ್ನು ನಿಯಂತ್ರಿಸಲು ಇದು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಎಥೆನಾಲ್‌ 85 ಭಾರತದ ಭವಿಷ್ಯದ ಇಂಧನ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಆರ್ಥಿಕತೆಗೆ, ಪರಿಸರಕ್ಕೆ ಮತ್ತು ರೈತರಿಗೆ ದೊಡ್ಡ ಮಟ್ಟದ ಲಾಭ ತರುವ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಇ85 ಎಥೆನಾಲ್‌ ಅಳವಡಿಕೆಯ ಮುಂದಿರುವ ಸವಾಲುಗಳೇನು?
ಮೂಲಸೌಕರ್ಯ ಕೊರತೆ:
ಎಥೆನಾಲ್‌ ಸಾಮಾನ್ಯ ಪೈಪ್‌ಲೈನ್‌ಗಳಲ್ಲಿ ತುಕ್ಕು ಹಿಡಿಸುವುದರಿಂದ, ಅದನ್ನು ಸಾಗಿಸಲು ಪ್ರತ್ಯೇಕ ಟ್ಯಾಂಕರ್‌ಗಳು ಬೇಕು. ಹಾಗೆಯೇ, ದೇಶಾದ್ಯಂತ ಇರುವ ಲಕ್ಷಾಂತರ ಪೆಟ್ರೋಲ್‌ ಬಂಕ್‌ಗಳಲ್ಲಿ ಇ85ಗಾಗಿ ಪ್ರತ್ಯೇಕ ಅಂಡರ್‌ಗ್ರೌಂಡ್‌ ಟ್ಯಾಂಕ್‌ ಮತ್ತು ಡಿಸ್ಪೆನ್ಸಿಂಗ್‌ ಪಂಪ್‌ಗಳನ್ನು ಅಳವಡಿಸಬೇಕು. ಇದಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳದ ಅಗತ್ಯವಿದೆ.

ಆಹಾರ ಮತ್ತು ಇಂಧನದ ನಡುವಿನ ಸಂಘರ್ಷ:
ಎಥೆನಾಲ್‌ ಅನ್ನು ಕಬ್ಬು, ಅಕ್ಕಿ ಮತ್ತು ಜೋಳದಿಂದ ಉತ್ಪಾದಿಸಲಾಗುತ್ತದೆ. ಇಂಧನಕ್ಕಾಗಿ ಕೃಷಿ ಭೂಮಿಯನ್ನು ಬಳಸಿದರೆ, ಭವಿಷ್ಯದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಅಪಾಯವಿದೆ.

ವಾಹನಗಳ ಉತ್ಪಾದನ ವೆಚ್ಚ:
ಫ್ಲೆಕ್ಸ್‌ ಫ್ಲೂಯೆಲ್‌ ವಾಹನಗಳ ಎಂಜಿನ್‌ ಬಿಡಿಭಾಗಗಳು ದುಬಾರಿ. ಇದರಿಂದ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಬೆಲೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.

ನೀರಿನ ಅಭಾವ:
ಕಬ್ಬು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯ. ಅಧಿಕ ಆದಾಯದ ನಿರೀಕ್ಷೆ ಇಲ್ಲವೇ ಎಥೆನಾಲ್‌ ಉತ್ಪಾದನೆ ಹೆಚ್ಚಿಸಲೆಂದೇ ಭಾರೀ ಪ್ರಮಾಣದಲ್ಲಿ ಕಬ್ಬು ಬೆಳೆಯಲಾರಂಭಿಸಿದರೆ ದೇಶದಲ್ಲಿ ಅಂತರ್ಜಲ ಕುಸಿತಕ್ಕೆ ಮತ್ತು ಪರಿಸರ ಅಸಮತೋಲನಕ್ಕೆ ಕಾರಣವಾಗಬಹುದು.

Share This Article