ವಾಷಿಂಗ್ಟನ್: ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಉಗ್ರ ದಾಳಿ (Pahalgam Attack) ಎಸಗಿದ ಪಾಕಿಸ್ತಾನ (Pakistan) ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ
ಇಂದು ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂದು ಹೆಸರಿಸುತ್ತದೆ. ಲಷ್ಕರ್-ಎ-ತಯ್ಯಿಬಾ (LeT) ಸಂಸ್ಥೆಯ ಭಾಗವಾಗಿರುರುವ ಟಿಆರ್‌ಎಫ್ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. 2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಯ ಹೊಣೆಯನ್ನು ಟಿಆರ್‌ಎಫ್ ಹೊತ್ತುಕೊಂಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಭಯೋತ್ಪಾದನೆಯನ್ನು ಎದುರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.