ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಇಂದು ಒಂದೇ ದಿನ ಹೂಡಿಕೆದಾರರ 11.19 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ. ಇದನ್ನೂ ಓದಿ: ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ
ಒಂದು ಹಂತದಲ್ಲಿ ಸಾವಿರ ಅಂಕ ಪತನಗೊಂಡಿದ್ದ ಸೆನ್ಸೆಕ್ಸ್ ನಂತರ ಸ್ವಲ್ಪ ಚೇತರಿಕೆಯಾಗಿತ್ತು. ಕೊನೆಗೆ 930.67 ಅಂಕ ಪತನವಾಗಿ 75,364.69 ರಲ್ಲಿ ತನ್ನ ಇಂದಿನ ವ್ಯವಹಾರ ಮುಗಿಸಿತು. ನಿಫ್ಟಿ 345 ಅಂಕ ಕುಸಿದು 22,904.45 ರಲ್ಲಿ ವ್ಯವಹಾರವನ್ನು ಮುಕ್ತಾಯಗೊಳಿಸಿತು. ಇದನ್ನೂ ಓದಿ: ಇದೇ ನೋಡಿ ಅಮೆರಿಕ ಪೌರತ್ವದ ಗೋಲ್ಡನ್ ಕಾರ್ಡ್ – 43 ಕೋಟಿ ರೂ. ಗೋಲ್ಡ್ ಕಾರ್ಡ್ ಫಸ್ಟ್ ಲುಕ್ ರಿಲೀಸ್
ಟಾಟಾ ಸ್ಟೀಲ್, ನ್ಯಾಷನಲ್ ಅಲ್ಯೂಮಿನಿಯಂ, ಹಿಂದೂಸ್ತಾನ್ ಕಾಪರ್, ವೇದಾಂತ, ಭಾರತ್ ಫೋರ್ಜ್ ಮದರ್‌ಸನ್ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿವೆ.