ವಾಷಿಂಗ್ಟನ್: ಪಾಕಿಸ್ತಾನವು ಒಂದು ಕಡೆ ಅಮೆರಿಕ (USA) ಮತ್ತು ಇರಾನ್ (Iran) ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಾ, ಇನ್ನೊಂದೆಡೆ ಇರಾನ್‌ಗೆ ಗುಪ್ತವಾಗಿ ಬೆಂಬಲ ನೀಡಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಪಾಕಿಸ್ತಾನವು (Pakistan) ಇರಾನ್‌ನ ಮಿಲಿಟರಿ ವಿಮಾನಗಳನ್ನು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ (Nur Khan Airbase) ನಿಲ್ಲಿಸಲು ರಹಸ್ಯವಾಗಿ ಅವಕಾಶ ಮಾಡಿಕೊಟ್ಟಿದೆ ಅಮೆರಿಕದ CBS News ವರದಿ ಮಾಡಿದೆ.
ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಏಪ್ರಿಲ್‌ನಲ್ಲಿ ಇರಾನ್ ಜೊತೆ ಕದನ ವಿರಾಮ ಘೋಷಿಸಿದ ಕೆಲವೇ ದಿನಗಳಲ್ಲಿ, ಇರಾನ್ ತನ್ನ ಹಲವು ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ಈ ವಾಯುನೆಲೆಗೆ ಸ್ಥಳಾಂತರಿಸಿದೆ ಎದು ವರದಿಯಾಗಿದೆ.
ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಗಳಿಂದ ತನ್ನ ಮಿಲಿಟರಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ RC-130 ವಿಚಕ್ಷಣಾ ವಿಮಾನವೂ ಸೇರಿದೆ. ಇದನ್ನೂ ಓದಿ: ಮೇ 13ರಿಂದ 3 ದಿನಗಳ ಕಾಲ ಟ್ರಂಪ್ ಚೀನಾ ಪ್ರವಾಸ

ಪಾಕಿಸ್ತಾನ ಸರ್ಕಾರವು ಈ ವರದಿಗಳನ್ನು ದಾರಿ ತಪ್ಪಿಸುವಂತದ್ದು ಎಂದು ಹೇಳಿದೆ. ಈ ವಿಮಾನಗಳು ಶಾಂತಿ ಮಾತುಕತೆಗೆ ಬಂದ ರಾಜತಾಂತ್ರಿಕ ನಿಯೋಗಕ್ಕೆ ಸಂಬಂಧಿಸಿದ್ದವೇ ಹೊರತು ಮಿಲಿಟರಿ ಉದ್ದೇಶಕ್ಕಾಗಿ ಅಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ನೂರ್ ಖಾನ್ ವಾಯುನೆಲೆಯು ನಗರದ ಹೃದಯಭಾಗದಲ್ಲಿದ್ದು, ಅಲ್ಲಿ ಇಷ್ಟು ದೊಡ್ಡ ಮಟ್ಟದ ವಿಮಾನಗಳನ್ನು ಅಡಗಿಸಿಡಲು ಸಾಧ್ಯವಿಲ್ಲ ಎಂದು ಪಾಕ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಪಾಕಿಸ್ತಾನದ ಈ ನಡೆಯನ್ನು ಖಂಡಿಸಿದ್ದು, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಪುನರ್ ವಿಮರ್ಶಿಸುವಂತೆ ಕರೆ ನೀಡಿದ್ದಾರೆ.
ಇದೇ ನೂರ್ ಖಾನ್ ವಾಯುನೆಲೆಯ ಮೇಲೆ ಕಳೆದ ವರ್ಷ ಭಾರತವು ತನ್ನ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ವಾಯುನೆಲೆಗೆ ಗಮನಾರ್ಹ ಹಾನಿಯಾದ ಬಗ್ಗೆ ಪಾಕಿಸ್ತಾನವು ಇತ್ತೀಚೆಗೆ ಅಧಿಕೃತವಾಗಿ ಒಪ್ಪಿಕೊಂಡಿತ್ತು.

