ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಿತ್ರಗಳಲ್ಲಿ ರಂಗೀಲಾ ಸಿನಿಮಾ ಕೂಡ ಒಂದು. ಇಂದಿಗೆ ರಂಗೀಲಾ ಸಿನಿಮಾ ಬಿಡುಗಡೆಯಾಗಿ 30 ವರ್ಷವಾಗಿದೆ. 1995 ಸೆಪ್ಟೆಂಬರ್ 8 ರಂದು ರಿಲೀಸ್ ಆಗಿದ್ದ ರಂಗೀಲಾ ಮ್ಯೂಸಿಕಲ್ ಹಿಟ್ ಜೊತೆಗೆ ಬ್ಲಾಕ್‌ಬಸ್ಟರ್ ಚಿತ್ರವಾಗಿತ್ತು. ಹಾಡುಗಳಂತೂ ಇಂದಿಗೂ ಎವರ್‌ಗ್ರೀನ್. ಈ ಚಿತ್ರದ ಮೂಲಕ ಬೆಡಗಿ ಊರ್ಮಿಳಾ ಮತೋಂಡ್ಕರ್ ಎಷ್ಟೋ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದ ನಾಯಕಿಯಾದ್ರು. ಈವರೆಗೂ ಊರ್ಮಿಳಾ ಅಂದ್ರೆ ರಂಗೀಲಾ ಎಂದೇ ಕರೆಯಲಾಗುತ್ತೆ. ಊರ್ಮಿಳಾ ಜೊತೆ ಅಮಿರ್ ಖಾನ್ ಹಾಗೂ ಜಾಕಿ ಶ್ರಾಫ್ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಊರ್ಮಿಳಾ ಹಸಿಬಿಸಿಯಾಗಿ ಕಾಣಿಸಿಕೊಂಡ ಪರಿಗೆ ಸಿನಿಮಾ ಇಂಡಸ್ಟ್ರಿ ಶೇಕ್ ಶೇಕ್ ಆಗಿತ್ತು. ಇದೀಗ ಅದೇ ರಂಗೀಲಾ ಚಿತ್ರದ ರಂಗೀಲಾರೇ ಹಾಡಿಗೆ ರೀಲ್ಸ್ ಮಾಡುವ ಮೂಲಕ 30 ವರ್ಷದ ಆನಿವರ್ಸರಿ ಖುಷಿ ಹಂಚಿಕೊಂಡಿದ್ದಾರೆ ಊರ್ಮಿಳಾ ಮತೋಂಡ್ಕರ್.
ಈ ಹಾಡಿನಲ್ಲಿ ಊರ್ಮಿಳಾ ಮಿನಿ ಫ್ರಾಕ್ ಧರಿಸಿ ಮುಂಬೈ ಬೀದಿಗಳಲ್ಲಿ ಜಸ್ಟ್ ಹೆಜ್ಜೆ ಹಾಕ್ತಾರೆ. ಹೊಸ ನಾಯಕಿಯ ಸೋಲೋ ಹಾಡು ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ. ಊರ್ಮಿಳಾ ಅಂದ ಚೆಂದ ನಟನೆ ನೃತ್ಯಕ್ಕೆ, ಆಶಾ ಭೋಸ್ಲೆ ಹಿನ್ನೆಲೆ ಗಾಯನ ಇನ್ನಿಲ್ಲದಂತೆ ಹಾಡಿಗೆ ಮಾದಕತೆಯ ಸ್ಪರ್ಷ ಕೊಡುತ್ತೆ. ಈಗಲೂ ಈ ಹಾಡಿನಲ್ಲಿ ಕಾಣಿಸ್ಕೊಂಡ ಊರ್ಮಿಳಾರನ್ನ ಯಾರೂ ಮರೆಯಲ್ಲ. ಇದೀಗ ಈ ಚಿತ್ರ 30 ವರ್ಷ ಪೂರೈಸಿರುವ ಹಿನ್ನೆಲೆ ಇನ್ಸ್ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿ ಸುದೀರ್ಘ ಪದಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ ನಟಿ ಊರ್ಮಿಳಾ. ತಮ್ಮನ್ನು ಬೆಳೆಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಊರ್ಮಿಳಾ ಹೇಳಿದ್ದೇನು?
ಇಂದಿಗೆ 30 ವರ್ಷಗಳ ಹಿಂದೆ, ರಂಗೀಲಾ ನಿಮ್ಮಲ್ಲಿ ಒಬ್ಬಳಾಗಿದ್ದಳು, ಇಂದಿಗೂ ಸಹ. ನೀವು ನಕ್ಕಾಗ, ನೀವು ಹುರಿದುಂಬಿಸಿದಾಗ, ಮಾಂತ್ರಿಕತೆಯಿಂದ ಪ್ರೀತಿಸಿದಾಗ ಅದು ಹಿಂದುರುಗಿ ಶಕ್ತಿಯಾಗುತ್ತದೆ. ನಿಮ್ಮ ಜೀವನದ ಒಂದು ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ, ನನ್ನನ್ನು ತುಂಬಾ ಪ್ರೀತಿಯಿಂದ ಅಪ್ಪಿಕೊಂಡಿದ್ದಕ್ಕಾಗಿ ಮತ್ತು ಕೆಲವರು ಮಾತ್ರ ಕನಸು ಕಾಣುವ ಧೈರ್ಯ ಮಾಡುವ ಸ್ಥಳದಲ್ಲಿ ನನ್ನನ್ನು ಇರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಮೆಚ್ಚುಗೆ, ಪ್ರಶಂಸೆಗಳು ಕೆಲವರಿಗೆ ಮಾತ್ರ ಸಿಗುತ್ತದೆ. ನನ್ನ ಪ್ರಯಾಣದಲ್ಲಿ ನಿಮ್ಮ ಪ್ರೀತಿ ಶ್ರೇಷ್ಠ ಆಶೀರ್ವಾದವಾಗಿದೆ. ಧನ್ಯವಾದಗಳು.