ಬೆಂಗಳೂರು:ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ (Urdu Habba) ಆಚರಣೆ ಮಾಡುವ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉರ್ದು ಕೂಡ ಈ ನೆಲದ ಭಾಷೆಯೇ ಅಲ್ಲವೇ? ಉರ್ದು ಹಬ್ಬ ಮಾಡಲಿ, ಹಿಂದಿ ಹಬ್ಬವನ್ನೂ ಮಾಡಲಿ. ನಮ್ಮಲ್ಲಿ ಹಿಂದಿ ಪ್ರಚಾರ ಸಭೆ ಇತ್ತು, ಈಗಲೂ ಇದೆ. ಹಿಂದಿ, ಉರ್ದು, ತಮಿಳು, ತೆಲುಗು, ಒಡಿಯಾ ಎಲ್ಲವೂ ನಮ್ಮ ದೇಶದ ಭಾಷೆಗಳೇ ಅಲ್ಲವೇ?” ಎಂದು ಪ್ರಶ್ನಿಸಿದರು.
ಸ್ಪೀಕರ್ ಯು.ಟಿ. ಖಾದರ್(UT Khader) ಅವರು ಈ ಬಗ್ಗೆ ಏನು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನಗಿಲ್ಲ. ಆದರೆ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಭಾಷೆಯ ಆಚರಣೆ ಇದ್ದರೂ ಅದನ್ನು ಆಚರಿಸುವುದರಲ್ಲಿ ತಪ್ಪೇನಿದೆ? ಅದರಿಂದ ಏನು ತೊಂದರೆಯಾಗುತ್ತದೆ?” ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರ ದ್ವಂದ್ವ ನೀತಿಯನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಆಂಧ್ರಪ್ರದೇಶದಲ್ಲಿ(Andra Pradesh) ಉರ್ದು ಎರಡನೇ ಅಧಿಕೃತ ಭಾಷೆಯಾಗಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಬಲಗೈ ಬಂಟರ ಸರ್ಕಾರವೇ ನಡೆಯುತ್ತಿದೆ. ಅಲ್ಲಿ ಇದು ತಪ್ಪಾಗದಿದ್ದರೆ, ಕರ್ನಾಟಕದಲ್ಲಿ ಮಾತ್ರ ಏಕೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲು ಮೇಲೆ ಉರ್ದು ಹಬ್ಬ ಆಚರಣೆಗೆ ಕರವೇ ವಿರೋಧ
ಬಿಜೆಪಿ ಜನರ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದೆ ಎಂದು ಕಿಡಿಕಾರಿದ ಸಚಿವರು, “ಚರ್ಚೆ ಮಾಡುವುದಿದ್ದರೆ ಜನಪರ ವಿಷಯಗಳ ಬಗ್ಗೆ ಮಾತನಾಡಿ. ರೈತರ ಸಮಸ್ಯೆಗಳು, ನಿರುದ್ಯೋಗ, ವಿದೇಶಾಂಗ ನೀತಿ ಮತ್ತು ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಧ್ವನಿ ಎತ್ತಿ. ರೈತರಿಗೆ ಬರ ಮತ್ತು ಬೆಳೆ ಪರಿಹಾರ ಕೊಡಿಸುವ ಕುರಿತು ಮಾತನಾಡಲಿ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸಿದರು; ಅದರ ಬಗ್ಗೆ ಬಿಜೆಪಿ ನಾಯಕರು ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದ ರೈತರ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಬಳಿಗೆ ಹೋಗಿ ಒಟ್ಟಾಗಿ ಪರಿಹಾರ ಕೇಳೋಣ ಬನ್ನಿ ಎಂದರೆ ಬಿಜೆಪಿಯವರು ಬರುವುದಿಲ್ಲ. ಆದರೆ ಹಿಂದೂ-ಮುಸ್ಲಿಂ ಮತ್ತು ಉರ್ದು ಭಾಷೆಯ ವಿಷಯಗಳು ಬಂದ ತಕ್ಷಣ ಇವರಿಗೆ ಎಲ್ಲಿಲ್ಲದ ಆಸಕ್ತಿ ಎದ್ದು ಕಾಣುತ್ತದೆ. ಇಂತಹ ಕೋಮು ವಿಚಾರಗಳಿಗೆ ಇವರಿಗೆ ಎಲ್ಲಿಂದ ಇಷ್ಟೊಂದು ಆಸಕ್ತಿ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

