– ಯುಪಿ ವಾರಿಯರ್ಸ್‌ಗೆ 12 ರನ್‌ಗಳ ರೋಚಕ ಜಯ
ಲಕ್ನೋ: ಕೊನೆಯಲ್ಲಿ ಸ್ನೇಹ್ ರಾಣಾ ಭರ್ಜರಿ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಡಬ್ಲ್ಯೂಪಿಎಲ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಮಾರ್ಚ್ 11 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಬಾಕಿ ಇರುವ ಒಂದು ಪಂದ್ಯವನ್ನಾಡಿ 2025ರ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನಕ್ಕೆ ವಿದಾಯ ಹೇಳಲಿದೆ.
ಇನ್ನೂ 2025ರ ಆವೃತ್ತಿಯ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಯುಪಿ ವಾರಿಯರ್ಸ್ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 42 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹ್‌ರಾಣಾ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್ ಪ್ರದರ್ಶಿಸಿದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 28 ರನ್ (1, 4, 6, 6, 5nb, 6) ರನ್ ಸಿಡಿಸಿದರು. ಆದ್ರೆ 19ನೇ ಓವರ್‌ನ ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿ ಕ್ಯಾಚ್ ನೀಡಿದರು. ಅಲ್ಲಿಯವರೆಗೂ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದಂತಾಯ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಯುಪಿ ತಂಡ 5 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.3 ಓವರ್‌ಗಳಲ್ಲಿ 123ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮಾಡಲು ಆರಂಭಿಸಿದ ಆರ್‌ಸಿಬಿ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ತಂಡ ಬೆಲೆ ತೆರಬೇಕಾಯಿತು.
ರಿಚಾ, ರಾಣಾ ಹೋರಾಟ ವ್ಯರ್ಥ:
ಒಂದೆಡೆ ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ರಿಚಾ ಘೋಷ್ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರು. ಕೇವಲ 33 ಎಸೆತಗಳಲ್ಲಿ 69 ರನ್ (6 ಬೌಂಡರಿ, 5 ಸಿಕ್ಸ್) ಗಳಿಸಿ ಔಟಾದರು. ಇದರೊಂದಿಗೆ ಪೆರ್ರಿ 28 ರನ್, ಜಾರ್ಜಿಯಾ 17 ರನ್, ಶಬ್ನೇನಿ ಮೇಘನಾ 27 ರನ್, ಕೊನೆಯಲ್ಲಿ ಸ್ನೇಹ್ ರಾಣಾ 6 ಎಸೆತಗಳಲ್ಲಿ 26 ರನ್ ಕೊಡುಗೆ ನೀಡಿದರು.
WPL ಇತಿಹಾಸದಲ್ಲೇ ದಾಖಲೆಯ ರನ್:
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಲು ಶುರು ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ರನ್ ಸಹ ಆಗಿದೆ. ಮತ್ತೊಂದೆಡೆ ಅಜೇಯ 99 ರನ್ ಗಳಿಸಿದ ಜಾರ್ಜಿಯಾ, ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.
ಆರಂಭಿಕರಾಗಿ ಕಣಕ್ಕಿಳಿದ ಯುಪಿಗೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೊಲ್ ಸ್ಫೋಟಕ ಆರಂಭ ತಂದುಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.1 ಓವರ್‌ಗಳಲ್ಲೇ 77 ರನ್‌ಗಳ ಜೊತೆಯಾಟ ಕಟ್ಟಿದರು. ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ ಸ್ಫೋಟಕ 46 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿ ಅಬ್ಬರಿಸಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಜಾರ್ಜಿಯಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಸ್ಫೋಟಕ ಪ್ರದರ್ಶನ ನೀಡಿದ ಜಾರ್ಜಿಯಾ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು.
56 ಎಸೆತಗಳನ್ನು ಎದುರಿಸಿದ ಜಾರ್ಜಿಯಾ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್‌ನೊಂದಿಗೆ 99 ರನ್‌ಗಳಿಸಿ ಅಜೇಯರಾಗುಳಿದರು.