ಚೆನ್ನೈ: ಟಿಕ್‍ಟಾಕ್ ಮಾಡುವುದನ್ನು ಬಿಟ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತಿ ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
24 ವರ್ಷದ ಅನಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ತಮಿಳುನಾಡಿದ ಅರಿಯಲೂರ್ ಗ್ರಾಮದವಳಾಗಿದ್ದು, ಪಝನಿವೆಲ್ ಜೊತೆ ಮದುವೆಯಾಗಿದ್ದಳು. ಪತಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದರು. ಇದನ್ನೂ ಓದಿ: ಪೋಷಕರಿಗೆ ಪತ್ರ ಬರೆದು, ಟಿಕ್‍ಟಾಕ್ ಗೆಳೆಯನ ಭೇಟಿಗೆ ಮನೆ ಬಿಟ್ಟ 14ರ ಪೋರಿ
ಅನಿತಾ ತನ್ನ ಮೊಬೈಲ್ ನಲ್ಲಿ ಟಿಕ್‍ಟಾಕ್ ಆ್ಯಪ್ ಅನ್ನು ಅಧಿಕವಾಗಿ ಬಳಸುತ್ತಿದ್ದಳು. ಎಷ್ಟು ಹುಚ್ಚು ಹಿಡಿದಿದ್ದಳು ಅಂದರೆ ಇಬ್ಬರ ಮಕ್ಕಳ ಬಗ್ಗೆ ಗಮನಕೊಡದೇ ಟಿಕ್ ಟಾಕ್ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದಳು. ಲೈಕ್‍ಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡುತ್ತಿದ್ದಳು.
ಅನಿತಾ ಮನೆಯ ನೆರೆಹೊರೆಯವರು ಇದನ್ನು ತಿಳಿದು ಸಿಂಗಾಪುರದಲ್ಲಿರುವ ಪತಿಯನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದರು. ತಕ್ಷಣ ಪತಿ ಪಝನಿವೆಲ್ ಫೋನ್ ಮಾಡಿ ಟಿಕ್‍ಟಾಕ್ ಬಿಟ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೋ, ಮೊದಲು ನಿನ್ನ ಜವಾಬ್ದಾರಿಯನ್ನು ಸರಿಯಾಗಿ ಮಾಡು ಎಂದು ಅನಿತಾಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಕೊಂಡ ಅನಿತಾ ಕೀಟಕನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅದಕ್ಕೂ ಮುನ್ನ ವಿಷ ಕುಡಿಯುವಾಗಲೂ ಟಿಕ್‍ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ. ಇದನ್ನು ನೋಡಿದ ನೆರೆಹೊರೆವರು ತಕ್ಷಣ ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಅನಿತಾ ಮೃತಪಟ್ಟಿದ್ದಾಳೆ. ಸದ್ಯಕ್ಕೆ ಪೆರಂಬಳೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದಾರೆ.