Thursday, 19th July 2018

Recent News

ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಕಿಕ್‍ಬ್ಯಾಕ್, ಎಂ.ಬಿ ಪಾಟೀಲರನ್ನ ನೇಣು ಹಾಕಿ: ಬಿಎಸ್‍ವೈ ಆಕ್ರೋಶ

ಬೆಂಗಳೂರು: ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಲಂಚ ಪಡೆದಿದ್ದಾರೆಂದು ಬಿಎಸ್ ಯಡಿಯೂರಪ್ಪ ಆರೋಪ ಮಾಡಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಎಂ.ಬಿ.ಪಾಟೀಲ್ ಮಣಿಸಲು ಬಿಜೆಪಿ ರಣತಂತ್ರ ಹೂಡಿದ್ದು, ಎಂ.ಬಿ ಪಾಟೀಲ್ ವಿರುದ್ಧ ದಾಖಲೆ ಸಮೇತ ಬಿಎಸ್‍ವೈ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಎಂ.ಬಿ.ಪಾಟೀಲ್ ವಿರುದ್ಧ ಗಂಭೀರ ಆರೋಪದ ದಾಖಲೆಯನ್ನ ಹುಡುಕಲು ಎನ್.ಆರ್.ರಮೇಶ್ ರನ್ನು ಬಿಟ್ಟಿದ್ದ ಬಿಎಸ್‍ವೈ, ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕೊನೆ ಕ್ಷಣದಲ್ಲಿ ಖಚಿತ ದಾಖಲೆ ಹಿಡಿದು ಬಾಂಬ್ ಹಾಕಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‍ವೈ, ದೇಶದಲ್ಲೇ ಅತ್ಯಂತ ಭ್ರಷ್ಟಾಚಾರಿ ಸರ್ಕಾರ ಎಂದೇ ಕುಖ್ಯಾತಿಯನ್ನ ಗಳಿಸಿರುವ ಸಿದ್ದರಾಮಯ್ಯ ಅವರ ಕಮಿಷನ್ ಸರ್ಕಾರಕ್ಕೆ ಕೊನೆ ಇಲ್ಲದಂತಾಗಿದೆ. ಸಿದ್ದರಾಮಯ್ಯನವರು ಯಾವಾಗಲು ತನಗೆಷ್ಟು ಪಾಲು ಕಮಿಷನ್ ಬರುತ್ತೆ ಅಂತಾ ಯೋಚನೆ ಮಾಡ್ತಿರುತ್ತಾರೆ. 2016 ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ಕಾಮಗಾರಿಗಳನ್ನ ಟೆಂಡರ್ ಕರೆಯದೇ ಭ್ರಷ್ಟಾಚಾರ ನಡೆದಿದೆ. ಈ ಅಕ್ರಮಕ್ಕೆ ಎಂ.ಬಿ.ಪಾಟೀಲ್ ಅವರೇ ಹೊಣೆಗಾರರು, ಅವರ ಆದೇಶ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಲ್ಲ ಎಂದು ಕಿಡಿಕಾರಿದರು.

ಇದಲ್ಲದೇ ಚಿತ್ರದುರ್ಗ ಜಿಲ್ಲೆಯ ನಾಲಾ ಕಾಮಗಾರಿಗೆ 157 ಕೋಟಿ ವರ್ಕ್ ಆರ್ಡರ್ ನೀಡಿದ್ದಾರೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಎರಡು ಕಂಪನಿಗಳು ಮಾತ್ರ ಭಾಗವಹಿಸಿದ್ದು, ಎಂ.ಬಿ.ಪಾಟೀಲ್ ಮತ್ತವರ ಆಪ್ತರು 27 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರೇ ನಿಮ್ಮ ಕಮಿಷನ್ ಎಷ್ಟು? ಎಂದು ಬಿಎಸ್‍ವೈ ಪ್ರಶ್ನಿಸಿದರು.

ರಸ್ತೆ ವಿಸ್ತೀರ್ಣದ ಹೆಸರಲ್ಲಿ ದಿನಾಂಕ 1-1-18 ರಂದು 157 ಕೋಟಿ 96 ಲಕ್ಷ ರೂ. ಅಕ್ರಮ ನಡೆದಿದೆ. ಎಸ್.ಎಸ್.ನ್ಯಾಷನಲ್ ಕನ್‍ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ನಲ್ಲಿ ಎರಡು ಕಂಪೆನಿ ಮಾತ್ರ ಭಾಗಿಯಾಗಿದೆ. ನಿಯಮದ ಪ್ರಕಾರದಲ್ಲಿ ಆಯಾ ಸಂಸ್ಥೆಗಳ ಕಾಮಗಾರಿಗೆ ದೃಢೀಕರಣದ ಪತ್ರವನ್ನ ಸಲ್ಲಿಸಿರಬೇಕು ಮತ್ತು 50 ಲಕ್ಷ ರೂ. ಕಾಮಗಾರಿ ಮಾಡಿರಬೇಕು. ಆದರೆ ಈ ಕಂಪೆನಿ ಸುಳ್ಳು ಪ್ರಮಾಣ ಪತ್ರ ನೀಡಿದೆ. ಇದರ ಜೊತೆಗೆ ಅಮ್ಮಾ ಕನ್‍ಸ್ಟ್ರಕ್ಷನ್ ಕಂಪೆನಿ ಕೂಡ ನಕಲಿ ಪ್ರಮಾಣ ಪತ್ರ ನೀಡಿದೆ ಎಂದು ಬಿಎಸ್‍ವೈ ಗಂಭೀರ ಆರೋಪ ಮಾಡಿದರು.

ಈ ವರ್ಕ್ ಡನ್ ಸರ್ಟಿಫಿಕೇಟ್ ಸುಳ್ಳು. ಈ ಕಂಪನಿಗಳು 626ಕಿ.ಮೀ. ವಿಸ್ತೀರ್ಣದ ರಸ್ತೆ ಕಾಮಗಾರಿಯನ್ನ ಮಾಡಿರೋದಾಗಿ ನಕಲಿ ಸರ್ಟಿಫಿಕೇಟ್ ನೀಡಿವೆ. ಮಣಿಪುರ, ತ್ರಿಪುರ ಎರಡರಲ್ಲೂ ನೀಡಿದ ಸರ್ಟಿಫಿಕೇಟ್‍ನಲ್ಲಿ ಒಬ್ಬರೇ ಎಂಜಿನಿಯರ್ ಸಹಿ ಇದೆ. ಇದರಿಂದ ಇದು ನಕಲಿ ಎಂಬುದು ಸ್ಪಷ್ಟ ಆಗಿದೆ. ಈ ಅಕ್ರಮದಲ್ಲಿ ಎಂ.ಬಿ ಪಾಟೀಲ್ ಮತ್ತು ಅವರ ಆಪ್ತರು 25 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಎರಡು ಕಂಪನಿಗಳು ತಮಿಳುನಾಡಿಗೆ ಸೇರಿದ್ದು, ವರ್ಕ್ ಡನ್ ಸರ್ಟಿಫಿಕೇಟನ್ನು ಮಣಿಪುರ, ತ್ರಿಪುರದಿಂದ ತಂದಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಸರ್ಕಾರ ಜನರ ದುಡ್ಡು ಹೀಗೆ ಲೂಟಿ ಹೊಡೆದು ಭ್ರಷ್ಟ ಸರ್ಕಾರ ಎಂದು ಸಾಬೀತುಪಡಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಎಷ್ಟು? ನೀವು ಎಷ್ಟು ಕಮಿಷನ್ ಪಡೆದಿದ್ದೀರಿ ಎಂದು ಪ್ರಶ್ನಿಸಿ, ದಾಖಲೆಗಳನ್ನ ರಿಲೀಸ್ ಮಾಡಿದ ಬಿಎಸ್‍ವೈ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ ಇದೇ ರೀತಿ ಹತ್ತಾರು ಪ್ರಕರಣಗಳು ನಡೆದಿವೆ. ಈ ಜಲಸಂಪನ್ಮೂಲ ಸಚಿವ ಇದಾನಲ್ಲ ಕಳೆದ 6 ತಿಂಗಳಿನಿಂದ ನನ್ನ ಮೇಲೆ ಐಟಿ ದಾಳಿ ಆಗುತ್ತೆ ಅಂತಾ ಹೇಳ್ತಿದ್ದ. ಈ ದೊಡ್ಡ ಮನುಷ್ಯನ ಮೇಲೆ ಇಲ್ಲಿಯವರೆಗೂ ಐಟಿ ದಾಳಿ ನಡೆದಿಲ್ಲ, ಅವನನ್ನ ಹ್ಯಾಂಗ್ ಮಾಡಬೇಕು ಎಂದು ಎಂ.ಬಿ ಪಾಟೀಲ್ ವಿರುದ್ಧ ಬಿಎಸ್‍ವೈ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ರು.

ಸಿದ್ದರಾಮಯ್ಯ ಹಗರಣ ಬಗ್ಗೆ ದಾಖಲೆ ಕೇಳಿದ್ರು, ಇವಾಗ ನಾವು ಬಿಡುಗಡೆ ಮಾಡಿರುವ ದಾಖಲೆ ನೋಡಿ ಹೇಳಲಿ. 24 ಗಂಟೆಯಲ್ಲಿ ನಮ್ಮ ಆರೋಪಕ್ಕೆ ಸರ್ಕಾರ ಉತ್ತರ ನೀಡಬೇಕು. ನಾಳೆ ಅಥವಾ ನಾಡಿದ್ದು ಇದಕ್ಕಿಂತ ದೊಡ್ಡ ಹಗರಣ ಬಯಲು ಮಾಡುತ್ತೇವೆ ಎಂದು ಬಿಎಸ್‍ವೈ ಸರ್ಕಾರಕ್ಕೆ ಸವಾಲು ಹಾಕಿದ್ರು.

Leave a Reply

Your email address will not be published. Required fields are marked *