ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಶಾಸಕ ಇರ್ಫಾನ್ ಸೋಲಂಕಿ ಹಾಗೂ ಆತನ ಕಿರಿಯ ಸಹೋದರ ರಿಜ್ವಾನ್‍ಗೆ ಸೇರಿದ 7 ಕೋಟಿ ರೂ ಗಳ ಮೌಲ್ಯದ ಆಸ್ತಿಯನ್ನು ಪೊಲೀಸರು ಗ್ಯಾಂಗ್‍ಸ್ಟರ್ ಕಾಯ್ದೆ ಅಡಿ ವಶಪಡಿಸಿಕೊಂಡಿದ್ದಾರೆ.
ಶಾಸಕ ಹಾಗೂ ಆತನ ಸಹೋದರನಿಗೆ ಸೇರಿದ 163 ಚದರ ಮೀಟರ್ ವಿಸ್ತೀರ್ಣದ ನಾಲ್ಕು ಪ್ಲಾಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕನ ಉಳಿದ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!
ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸೋಲಂಕಿ (Irfan Solanki) ಹಾಗೂ ರಿಜ್ವಾನ್ ಇಬ್ಬರನ್ನೂ ಪ್ರತ್ಯೇಕ ಜೈಲಿನಲ್ಲಿಡಲಾಗಿದೆ ಎಂದು ಫೀಲ್ಖಾನಾ (Pheelkhana) ಪೊಲೀಸ್ ಠಾಣಾಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸೋಲಂಕಿ ಅವರು ಎಸ್‍ಪಿ ಆಡಳಿತ ಅವಧಿಯಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಕಾನ್ಪುರ ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದುಕೊಂಡಿದ್ದರು ಎಂದು ಸಿಂಗ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ಸೇರಿದ ಗಾಜಿಯಾಬಾದ್ ಹಾಗೂ ನೋಯ್ಡಾದ ಪ್ಲಾಟ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ಜಜ್ಮೌ, ಚಕೇರಿ, ಚಮನ್‍ಗಂಜ್ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವುಗಳ ಅಂದಾಜು ಮೊತ್ತ ಸುಮಾರು 150-200 ಕೋಟಿ ರೂ ಗಳು ಎಂದು ಅಂದಾಜಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಶಾಸಕ ಹಾಗೂ ಅವರ ಗ್ಯಾಂಗ್‍ಗೆ ಸೇರಿದ ಆಸ್ತಿಗಳ ವಿವರ ಪಡೆಯಲು ಕಾನ್ಪುರ (Kanpur) ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾನ್ಪುರ್ ಮುನ್ಸಿಪಾಲ್ ಕಾರ್ಪೊರೇಷನ್‍ನ ಸಹಾಯ ಕೇಳಿದ್ದೇವೆ ಎಂದು ಜಂಟಿ ಪೊಲೀಸ್ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.
ಸೋಲಂಕಿ ಮತ್ತು ರಿಜ್ವಾನ್, ಕಳೆದ ನವೆಂಬರ್ 7 ರಂದು ಮಹಿಳೆಯೊಬ್ಬರಿಂದ ಪ್ಲಾಟ್ ಕಿತ್ತುಕೊಳ್ಳುವ ಸಲುವಾಗಿ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ಆರೋಪ ಹಾಗೂ ಡಿಸೆಂಬರ್ 2 ರಂದು ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಜೈಲಿನಲ್ಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಸೋಲಂಕಿ ಪ್ರಸ್ತುತ ಮಹಾರಾಜ್‍ಗಂಜ್ ಜೈಲಿನಲ್ಲಿದ್ದಾನೆ. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್