ಲಕ್ನೋ: ಭಾರತ (India) ಆಸ್ಟ್ರೇಲಿಯಾ (Australia) ನಡುವಿನ ವಿಶ್ವಕಪ್ (World Cup Cricket Final) ಪಂದ್ಯದ ವೇಳೆ ಟಿವಿ ಸ್ವಿಚ್ ಆಫ್ ಮಾಡಿದ್ದಕ್ಕೆ ತಂದೆಯೇ ಮಗನನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಫೈನಲ್ ಪಂದ್ಯವನ್ನು ತಂದೆ ಗಣೇಶ್ ಪ್ರಸಾದ್ ಟಿವಿಯಲ್ಲಿ ವೀಕ್ಷಿಸುತ್ತಿದ್ದ. ಈ ವೇಳೆ ಪುತ್ರ ದೀಪಕ್ ರಾತ್ರಿಯ ಊಟಕ್ಕೆ ಆಹಾರ ಸಿದ್ಧಪಡಿಸುವಂತೆ ಹೇಳಿದ್ದಾನೆ.
ಮಗನ ಮಾತಿಗೆ ಗಣೇಶ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಮತ್ತು ಕ್ರಿಕೆಟ್ ನೋಡುವುದರಲ್ಲಿ ಮಗ್ನನಾಗಿದ್ದ. ತನ್ನ ಮಾತಿಗೆ ಸ್ಪಂದಿಸದ್ದಕ್ಕೆ ಸಿಟ್ಟಾದ ಮಗ ಟಿವಿಯನ್ನೇ ಸ್ವಿಚ್ ಆಫ್ ಮಾಡಿದ್ದಾನೆ. ಸ್ವಿಚ್ ಆಫ್ ಮಾಡಿದ ನಂತರ ತಂದೆ ಮತ್ತು ಮಗನ ಮಧ್ಯೆ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ಹೋಗಿದ್ದು ತಂದೆ ಎಲೆಕ್ಟ್ರಿಕ್ ಕೇಬಲ್ ವಯರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದ. ಖಚಿತ ಮಾಹಿತಿ ಪಡೆದ ಪೊಲೀಸರು ಗಣೇಶ್ ಪ್ರಸಾದ್‌ನನ್ನು ಬಂಧಿಸಿದ್ದಾರೆ.
ರೈತ ಗಣೇಶ ಪ್ರಸಾದ್ ಮದ್ಯವ್ಯಸನಿಯಾಗಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ಮಧ್ಯೆ ಜಗಳ ನಡೆಯುತ್ತಲೇ ಇತ್ತು. ಫೈನಲ್ ಕ್ರಿಕೆಟ್ ಪಂದ್ಯ ನೋಡುವಾಗ ನಡೆದ ಜಗಳದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.