ಲಕ್ನೋ: ಎಂಟು ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಬಾಲಕಿ ವಿರೋಧಿಸಿದ್ದಕ್ಕೆ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆಗೈದ ಘಟನೆ ಉತ್ತರ ಪ್ರದೇಶದ (Uttar Pradesh) ವಾರಣಾಸಿಯ (Varanasi) ಸುಜಾಬಾದ್‌ನಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಇರ್ಷಾದ್ ಎಂದು ಗುರುತಿಸಿದ್ದು, ಆತನ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಆತನಿಗೆ ಗುಂಡೇಟು ನೀಡಿ ಪೊಲೀಸರು ಬಂಧಿಸಿದ್ದಾರೆ.
ವಾರಣಾಸಿಯ ಶಾಲೆಯ ಬಳಿ ಗೋಣಿ ಚೀಲದಲ್ಲಿ ತುಂಬಿದ್ದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಈ ಸಂಬಂಧ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇರ್ಷಾದ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಗೋಣಿಚೀಲದಲ್ಲಿ ಶವದೊಂದಿಗೆ ಹೊರಗೆ ಬರುತ್ತಿರುವುದು ಪತ್ತೆಯಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯತ್ನವನ್ನು ವಿರೋಧಿಸಿದ್ದಕ್ಕೆ ಇರ್ಷಾದ್ ಬಾಲಕಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಅಂಗವಿಕಲ ಆಟೋ ಚಾಲಕರೊಬ್ಬರ ಪುತ್ರಿಯಾಗಿದ್ದು, ಮಂಗಳವಾರ ಸಂಜೆ 6:30ರ ಸುಮಾರಿಗೆ ಸಮೀಪದ ಅಂಗಡಿಯಲ್ಲಿ ಸೊಳ್ಳೆ ಬತ್ತಿ ಖರೀದಿಸಲು ಮನೆಯಿಂದ ಹೊರಟಿದ್ದಳು. ಆಕೆ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಆರೋಪಿ ಇರ್ಷಾದ್ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.