– ಪತ್ನಿ ಜೊತೆ ಗಲಾಟೆ ಬಳಿಕ ಖಿನ್ನತೆಗೆ ಜಾರಿದ್ದ ಎಸ್‍ಪಿ
– ವೈದ್ಯಕೀಯ ವಿದ್ಯಾಭ್ಯಾಸ ನಡೆಸುತ್ತಿರುವ ಪತ್ನಿ
ಕಾನ್ಪುರ: ಕೃಷ್ಣಾಷ್ಟಮಿಯಂದು ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಶುರುವಾದ ಗಲಾಟೆ ಐಪಿಎಸ್ ಅಧಿಕಾರಿಯೊಬ್ಬರ ಆತ್ಮಹತ್ಯೆ ಯತ್ನದಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶದ ಈ ಐಪಿಎಸ್ ಅಧಿಕಾರಿ ಸದ್ಯ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ಈ ಅಧಿಕಾರಿ ತನ್ನ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎಂಬ ವಿಚಾರವೂ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಕಳೆದ 1 ತಿಂಗಳ ಹಿಂದಷ್ಟೇ ಅಂದರೆ ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
Advertisement
ಆಗಿದ್ದೇನು?
ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಐಪಿಎಸ್ ಅಧಿಕಾರಿ ಸುರೇಂದ್ರ ದಾಸ್ ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲೇ ಕೃಷ್ಣಾಷ್ಟಮಿ ಆಚರಣೆ ಬಳಿಕ ತಮ್ಮ ಮೊಬೈಲ್ ಹಾಗೂ ಲ್ಯಾಪ್‍ಟಾಪಲ್ಲಿ ವಿಷವನ್ನು ತೆಗೆದುಕೊಳ್ಳುವುದು ಹೇಗೆ, ರೇಜರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿ ವೀಡಿಯೋಗಳನ್ನು ನೋಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದ್ದು, ಈ ವೇಳೆ ಈ ಮಹತ್ವದ ಅಂಶಗಳು ಬಯಲಾಗಿವೆ ಎಂದು ಕಾನ್ಪುರರ ಎಸ್‍ಎಸ್‍ಪಿ ಅನಂತ್ ದೇವ್ ಹೇಳಿದ್ದಾರೆ.
Advertisement
ಸದ್ಯ ದಾಸ್ ಅವರನ್ನು ಉಳಿಸಿಕೊಳ್ಳಲು ವೈದ್ಯಾಧಿಕಾರಿಗಳ ತಂಡ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದು, ಮುಂಬೈನಿಂದ ವಿಶೇಷ ವೈದ್ಯಕೀಯ ತಂಡ ದೌಡಾಯಿಸಿದೆ. ಎಲ್ಲರೂ ದಾಸ್ ಉಳಿವಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪೂರ್ವ ಕಾನ್ಪುರ ಎಸ್‍ಪಿಯಾಗಿ ಸುರೇಂದ್ರ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಬುಧವಾರ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?
ದಾಸ್ ಹಾಗೂ ಅವರ ಪತ್ನಿ ರವೀನಾ ಸಿಂಗ್ ಮಧ್ಯೆ ಆಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ ಅಂತ ದಾಸ್ ಮನೆಯ ಹತ್ತಿರದ ನಿವಾಸಿಯೊಬ್ಬರು ತಿಳಿಸಿದ್ದಾರೆ. ದಾಸ್ ಪತ್ನಿ ರವೀನಾ ಅವರು ಜಿಎಸ್‍ವಿಎಂ ಮೆಡಿಕಲ್ ಕಾಲೇಜಿನಲ್ಲಿ ಮಾಸ್ಟರ್ಸ್ ಇನ್ ಸರ್ಜರಿ ವ್ಯಾಸಂಗ ಮಾಡುತ್ತಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯಂದು ದಾಸ್ ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಅವರ ಸಂಬಂಧಿಕರು ಮನೆಗೆ ಬಂದು ಸಂಧಾನ ಮಾತುಕತೆ ನಡೆಸಿದ್ದರು. ಇದಾದ ಬಳಿಕ ದಾಸ್ ಖಿನ್ನತೆಗೆ ಜಾರಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸ್ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಅಲ್ಲದೇ ವಿಷಕಾರಿ ಅಂಶ ಸೇವಿಸಿದ್ದರಿಂದ ಅದು ದಾಸ್ ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಅಂತ ಆಸ್ಪತ್ರೆಯ ವೈದ್ಯಕೀಯ ಮುಖ್ಯ ಅಧೀಕ್ಷಕ ಡಾ. ರಾಜೇಶ್ ಅಗರ್‍ವಾಲ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv