ಲಕ್ನೋ: ಶೌಚಾಲಯ ನಿರ್ಮಾಣಕ್ಕಾಗಿ 2ನೇ ಕಂತಿನ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಯುವಕನೊಬ್ಬ ಬ್ಲಾಕ್ ಅಭಿವೃದ್ಧಿ ಅಧಿಕಾರಿ ವಾಹನದ ಬಾನೆಟ್ ಹಿಡಿದುಕೊಂಡು ಸುಮಾರು ನಾಲ್ಕು ಕಿಲೋ ಮೀಟರ್ ಪ್ರಯಾಣ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಪೂರ್ವ ಉತ್ತರ ಪ್ರದೇಶ ರಾಮ್ ನಗರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರಾಮ್ ನಗರ್ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತ ಶೌಚಾಲಯಗಳ ನಿರ್ಮಾಣ ಮಾಡಿತ್ತು. ಆದರೆ ಈ ಸಂಬಂಧ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿತ್ತು. ಅಧಿಕಾರಿಗಳ ಈ ಧೋರಣೆಯಿಂದ ಕಾರ್ಮಿಕರು ಬೇಸತ್ತಿದ್ದರು.
Advertisement
Advertisement
ಇತ್ತೀಚೆಗೆ ರಾಮನಗರ್ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿ ಪಂಕಜ್ ಕುಮಾರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದರು. ಪಂಕಜ್ ಕುಮಾರ್ ಗೌತಮ್ ಬಳಿ ಬ್ರಿಜ್ ಪಾಲ್ ತೆರಳಿ ಶೌಚಾಲಯ ನಿರ್ಮಾಣಕ್ಕಾಗಿ 2ನೇ ಕಂತಿನ ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಅಧಿಕಾರಿ ಮಾತ್ರ ಏನು ಉತ್ತರ ಕೊಡದೆ ಕಾರ್ ಏರಿ ಹೊರಡಲು ಸಿದ್ಧರಾಗಿದ್ದರು.
Advertisement
ಪಂಕಜ್ ಕುಮಾರ್ ಕಾರು ಹತ್ತುತ್ತಿದ್ದಂತೆಯೇ ಪ್ರತಿಭಟನಾಕಾರರು ಅವರ ಕಾರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಕಪ್ಪು ಅಂಗಿ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದ ಬ್ರಿಜ್ ಪಾಲ್ ಕಾರಿನ ಬಾನೆಟ್ ಹತ್ತಿದ್ದಾನೆ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಕೆಳಗೆ ಇಳಿಯುವಂತೆ ಆತನಿಗೆ ಹೇಳಿದ್ದಾರೆ. ಆದರೆ ಅಧಿಕಾರಿ ಮಾತ್ರ ಕಾರು ನಿಲ್ಲಿಸದೇ ಸುಮಾರು 4 ಕಿ.ಮೀ ದೂರದವರೆಗೂ ಕಾರಿನ ಬಾನೆಟ್ ಮೇಲೆಯೇ ಹೊತ್ತೊಯ್ದಿದ್ದಾರೆ. ವಾಹನ ನಿಲ್ಲಿಸುವಂತೆ ಯುವಕ ಕೇಳಿಕೊಂಡರೂ ಆಕ್ರೋಶಗೊಂಡ ಪಂಕಜ್ ಕುಮಾರ್ ಹಾಗೆಯೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.
Advertisement
ಕಾರು ಸುಮಾರು 4 ಕಿ.ಮೀ ದೂರ ಸಾಗಿದ ಬಳಿಕ ಸ್ಪೀಡ್ ಬ್ರೇಕರ್ ಬಂದಾಗ ಕಾರು ನಿಂತಿದೆ. ಈ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಬ್ರಿಜ್ ಪಾಲ್ ಇಳಿದು ಹೋಗಿದ್ದಾರೆ. ಅದೃಷ್ಟವಶಾತ್ ಆತನಿಗೇನು ಆಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅಧಿಕಾರಿಯ ವರ್ತನೆಗೆ ಜನರು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವೀರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
https://www.youtube.com/watch?v=eiLiCGc8yLM