ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಕರೆದ ಕಾಂಗ್ರೆಸ್ ಮುಖಂಡ ಪಕ್ಷದಿಂದ ವಜಾ

Public TV
2 Min Read
rahul gandhi

ಲಕ್ನೋ: ಉತ್ತರಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಹೊಗಳುವ ಸಂದರ್ಭದಲ್ಲಿ ಪಪ್ಪು ಎಂದು ಸಂಭೋದಿಸಿದ್ದಕ್ಕೆ ಪಕ್ಷದಿಂದ ವಜಾಗೊಂಡಿದ್ದಾರೆ.

ಮೀರತ್‍ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ಪ್ರಧಾನ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ವಾಟ್ಸಪ್ ಗ್ರೂಪ್‍ಗೆ ಸಂದೇಶವೊಂದನ್ನ ಕಳಿಸಿದ್ರು. ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ 5 ಪ್ರತಿಭಟನಾನಿರತ ರೈತರು ಬಲಿಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇತ್ತೀಚೆಗೆ ಮಧ್ಯಪ್ರದೇಶದ ಮಂಡಸೌರ್ ಗ್ರಾಮಕ್ಕೆ ಭೇಟಿ ನೀಡಿದ್ದನ್ನು ವಿನಯ್ ಪ್ರಧಾನ ತಮ್ಮ ಸಂದೇಶದಲ್ಲಿ ಹೊಗಳಿದ್ದರು.

ಪಪ್ಪು ಬೇಕಿದ್ರೆ ಅದಾನಿ, ಅಂಬಾನಿ ಹಾಗೂ ಮಲ್ಯ ಜೊತೆ ಕೈಜೋಡಿಸಬಹುದಿತ್ತು. ಆದ್ರೆ ಅವರು ಹಾಗೆ ಮಾಡಲಿಲ್ಲ. ಪಪ್ಪು ಬೇಕಿದ್ರೆ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯೂ ಆಗಬಹುದಿತ್ತು. ಆದ್ರೆ ಅವರು ಆ ಮಾರ್ಗದಲ್ಲಿ ಹೋಗಲಿಲ್ಲ. ಬದಲಾಗಿ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಂಡಸೌರ್‍ಗೆ ಹೋದ್ರು ಎಂದು ಪ್ರಧಾನ್ ಸಂದೇಶ ಕಳಿಸಿದ್ದರು.

ಈ ಸಂದೇಶಕ್ಕೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ದ್ವಿವೇದಿ ಮಂಗಳವಾರದಂದು ಪತ್ರವೊಂದನ್ನ ನೀಡಿದ್ದು, ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನ್ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ನಾಯಕತ್ವವನ್ನು ದುರ್ಬಳಕೆ ಮಾಡಿಕೊಳ್ಳೋ ಪ್ರಯತ್ನವಿದು. ಬೇರೆ ಪಕ್ಷದವರು ಇದರಲ್ಲಿ ಭಾಗಿಯಾಗಿರುವಂತಿದೆ. ಮಧ್ಯಪ್ರದೇಶದಲ್ಲಿ ರೈತರ ಸಂಕಷ್ಟದಂತಹ ಮುಖ್ಯವಾದ ಸಮಸ್ಯೆಗಳಿಂದ ಗಮನ ಬೇರೆಡೆ ಹೋಗುವಂತೆ ಮಾಡಲು ಈ ರೀತಿ ಮಾಡಿದ್ದಾರೆ. ವಿನಯ್ ಪ್ರಧಾನ್ ಕಾಂಗ್ರೆಸ್ ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ರಾಮಕೃಷ್ಣ ದ್ವಿವೇದಿ ಪತ್ರದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಸಮರ್ಥನೆ ನೀಡಿರೋ ವಿನಯ್ ಪ್ರಧಾನ್, ಈ ಸಂದೇಶವನ್ನು ನಾನು ಕಳಿಸಿಲ್ಲ. ಈ ಬಗ್ಗೆ ವಿವರಿಸಲು ನನಗೆ ಅವಕಾಶವೇ ನೀಡಿಲ್ಲ. ಹಂಚಿಕೆ ಆಗುತ್ತಿರೋ ಸ್ಕ್ರೀನ್‍ಶಾಟ್‍ಗಳನ್ನ ಫೋಟೋಶಾಪ್ ಮಾಡಲಾಗಿದೆ. ನಾನು ರಾಹುಲ್ ಗಾಂಧಿ ಅವರನ್ನ ಗೌರವಿಸುತ್ತೇನೆ. ಅವರ ಬಗ್ಗೆ ಮಾತನಾಡಲು ಅಂತಹ ಭಾಷೆಯನ್ನ ಬಳಸಲ್ಲ. ನನ್ನನ್ನು ಪಕ್ಷದಿಂದ ತೆಗೆಯುವ ಮುನ್ನ ನನ್ನ ಮಾತನ್ನು ಕೇಳಬೇಕಿತ್ತು. ನಾನು ಅವರನ್ನು ಭೇಟಿಯಾಗಲು ಅವಕಾಶ ಕೋರಿದ್ದೇನೆ. ಎಲ್ಲವನ್ನೂ ಅವರಿಗೆ ವಿವರಿಸುತ್ತೇನೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ರಾಹುಲ್ ಗಾಂಧಿಯನ್ನು ಟೀಕಿಸಲು ಪಪ್ಪು ಎಂದು ಸಂಬೋಧಿಸುದುವುದನ್ನು ಇಲ್ಲಿ ಗಮನಿಸಬಹುದು.

Share This Article
Leave a Comment

Leave a Reply

Your email address will not be published. Required fields are marked *