ಲಕ್ನೋ: ಬಿಜೆಪಿ ಮುಖಂಡನೊಬ್ಬ ತನ್ನ ಸೊಸೆಗೆ ಲೈಂಗಿಕ ಕಿರಿಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಜನಸತ್ ಪಟ್ಟಣದಲ್ಲಿ ನಡೆದಿದೆ.
ಬಿಜೆಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಹೇಶ್ ಚಂದ್ ಶರ್ಮಾ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮಗ ಮತ್ತು ಸೊಸೆಯ ನಡುವಿನ ಆಸ್ತಿ ವಿವಾದದಿಂದಾಗಿ ಈ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ನಾನು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಮಹೇಶ್ ಚಂದ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಮಹೇಶ್ ಚಂದ್ ಶರ್ಮಾ ವಿರುದ್ಧ ಸೊಸೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354(ಮಹಿಳೆಯ ಮುಗ್ದತೆ ದುರುಪಯೋಗ ಪಡಿಸಿಕೊಂಡು ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿ ಶುಕ್ರವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಜನಸತ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಐವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಶ್ನಿಸಿದ ಆಕೆಯ ಕುಟುಂಬದ ಸದಸ್ಯರನ್ನೂ ಸಹ ಥಳಿಸಿದ್ದಾರೆ. ಪರಾರಿಯಾಗಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.