ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಹಮ್ಮಿಕೊಂಡಿರುವುದು ನಮ್ಮ ಮಂಡ್ಯ ಜಿಲ್ಲೆಗೆ ಹೆಮ್ಮೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಯುವಜನೋತ್ಸವ ಹಿನ್ನೆಲೆಯಲ್ಲಿ ಇಂದು ಲಾಂಛನ ಬಿಡುಗಡೆಗೊಳಿಸಲಾಯಿತು. ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, ಸಚಿವ ಡಾ.ನಾರಾಯಣಗೌಡ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು. ಯುವಕ, ಯುವತಿಯರಲ್ಲಿ ಹುದುಗಿರುವ ಹತ್ತು ಹಲವು ಬಗ್ಗೆ ಪ್ರತಿಭೆಯ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಲು ರಾಜ್ಯ ಮಟ್ಟದ ಯುವ ಜನೋತ್ಸವ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4 ಮತ್ತು 5 ರಂದು ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Advertisement
Advertisement
ಜನವರಿ 4 ರಂದು ಬೆಳಗ್ಗೆ 11.30ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದಾರೆ. ಆದಿ ಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರ ಸಚಿವ ಡಾ.ನಾರಾಯಣಗೌಡ ಅವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಜನವರಿ 5 ರಂದು ಮಧ್ಯಾಹ್ನ 3 ಗಂಟೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಉನ್ನತ ಶಿಕ್ಷಣ ಐಟಿ-ಬಿಟಿ ಸಚಿವರಾದ ಡಾ.ಸಿಎನ್ ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
Advertisement
Advertisement
ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸಲು ಯುವ ಜನೋತ್ಸವವನ್ನು ಆಚರಿಸಲಾಗುತ್ತಿದೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಗಾಯನ, ವಾದ್ಯ, ನೃತ್ಯ, ಏಕಾಂಕ ನಾಟಕ, ಆಶುಭಾಷಣ ಸ್ಪರ್ಧೆ ಸೇರಿದಂತೆ ಸುಮಾರು 18 ಪ್ರಕಾರದ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಜಿಲ್ಲೆಯಿಂದ ತಲಾ 57 ಸ್ಪರ್ಧಿಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಲಿದ್ದಾರೆ. ಎರಡೂ ಸಾವಿರಕ್ಕೂ ಅಧಿಕ ಮಂದಿ ಈ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನದಟ್ಟಣೆ ಉಂಟಾಗದ ರೀತಿ 1 ಪ್ರಮುಖ ವೇದಿಕೆ ಸೇರಿ 5 ವೇದಿಕೆಗಳನ್ನ ನಿರ್ಮಿಸಲಾಗಿದೆ. ಜೊತೆಗೆ ಒಂದು ಎಮರ್ಜೆನ್ಸಿ ಓಪನ್ ಸ್ಟೇಜ್ ಕೂಡ ನಿರ್ಮಿಸಲಾಗಿದೆ. ಅರ್ಹ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರ ಮಟ್ಟದ ಯುವಜನೋತ್ಸವಕ್ಕೆ ಕಳುಹಿಸಿಕೊಡುವ ಸಲುವಾಗಿ 30 ತೀರ್ಪುಗಾರರನ್ನು ನಿಯೋಜಿಸಲಾಗಿದೆ. ಯುವ ಜನೋತ್ಸವಕ್ಕೆ ಬರುವ ಪ್ರತಿಯೊಬ್ಬರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ.
ಯುವಜನೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸಲು ಸಚಿವ ಡಾ. ನಾರಾಯಣಗೌಡ ಅವರು ಈಗಾಗಲೇ ಕ್ರಮವಹಿಸಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ 15 ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ, ಗುಂಪುಗಳಿಗೆ ನೀಡುವ ಮೊದಲ ಬಹುಮಾನ 25 ಸಾವಿರ, ಎರಡನೇ ಬಹುಮಾನ 15 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ.
ದೇಶದ ಯುವಶಕ್ತಿಯನ್ನು ಸದ್ಬಾಳಕೆ ಮಾಡಿಕೊಳ್ಳಬೇಕು:
ಇರುವ ದೇಶಗಳಲ್ಲಿ ಅತ್ಯಂತ ಯಂಗೆಸ್ಟ್ ದೇಶ ಎಂದರೇ ನಮ್ಮ ಭಾರತ. ನಮ್ಮ ದೇಶದಲ್ಲಿರುವ ಯುವ ಶಕ್ತಿ ಸದ್ಬಳಕೆ ಮಾಡಿಕೊಳ್ಳುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕರ್ತವ್ಯ. ಯುವ ಜನತೆಯಲ್ಲಿರುವ ಧನಾತ್ಮಕ ಗುಣಗಳನ್ನು ಬಳಕೆ ಮಾಡಿಕೊಳ್ಳುವಂತಹ ಕಾರ್ಯಕ್ರಮವೇ ಈ ಯುವ ಜನೋತ್ಸವ. ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವನ್ನು ಈ ಬಾರಿ ಶ್ರೀಕ್ಷೇತ್ರದಲ್ಲಿ ಆಯೋಜಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದರು. ಇದರ ಜೊತೆಗೆ ಜನವರಿ 5 ರಂದು ಶ್ರೀಕ್ಷೇತ್ರ ಆದಿಚುಂಚನಗಿರಿ ವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಯುವ ಜನೋತ್ಸವ ಕಾರ್ಯಕ್ರಮ ಆಚರಣೆ:
ಯುವಜನರು ನಮ್ಮ ಸಂಸ್ಕೃತಿ, ಪರಂಪರೆಗಳ ಹರಿಕಾರರು ಎನ್ನುವ ಹೊನ್ನುಡಿಗೆ ಸಾಕ್ಷಿಗಳಾಗಲು ಪ್ರೇರೇಪಿಸುವುದು ಈ ಯುವಜನೋತ್ಸವ ಉದ್ದೇಶವಾಗಿದೆ. ಶ್ರೀನಿರ್ಮಲಾನಂದ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಪುಣ್ಯಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವ ನಡೆಯುತ್ತಿರುವುದು ಸಂತಸದ ವಿಚಾರ. ಯುವ ಜನತೆ ತಮ್ಮಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸುವುದು ನಮ್ಮ ಕರ್ತವ್ಯ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಿ ಯಶಸ್ವಿಗೊಳಿಸುವ ವಿಶ್ವಾಸವಿದೆ ಎಂದು ಸಚಿವ ಡಾ. ನಾರಾಯಣ ಗೌಡ ಅವರು ತಿಳಿಸಿದರು.
ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಅಶ್ವತಿ, ಎಸ್‍ಪಿ ಯತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.