ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಾಗೂ ಮಠದ ನಡುವೆ ಕಿತ್ತಾಟ ನಡೆಯುತ್ತಿದ್ದು, ಈ ಸಂಬಂಧ ಮಠದ ಪರ ನಿಂತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಅರ್ಚಕ ಕುಮಾರ್ ಬನ್ನಿಂತಾಯ(61) ಹಲ್ಲೆಗೊಳಗಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ ವಿಷಯಕ್ಕೆ ಮಠ ಮತ್ತು ದೇವಸ್ಥಾನದ ನಡುವೆ ಗಲಾಟೆ ನಡೆದಿತ್ತು. ಇದರಿಂದ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಕೂಡ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಠದ ಪರ ನಿಂತಿದ್ದರು. ಶನಿವಾರ ರಾತ್ರಿ ವೇಳೆ ದೇವಸ್ಥಾನದ ಹೊರಗೆ ಅರ್ಚಕ ನಿಂತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.
Advertisement
Advertisement
ಹಲ್ಲೆಯಿಂದ ಗಾಯಗೊಂಡ ಅರ್ಚಕರನ್ನು ಸ್ಥಳದಲ್ಲಿದ್ದವರು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ದೇವಸ್ಥಾನದ ವಿರುದ್ಧ ನಿಂತು ಮಠಕ್ಕೆ ಬೆಂಬಲ ನೀಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
Advertisement
Advertisement
ಬೆಂಗಳೂರಿನ ನಿವಾಸಿ ಪಳನಿಸ್ವಾಮಿ ಅವರು ಸರ್ಪ ಸಂಸ್ಕಾರ ಪೂಜೆ ಮಾಡಿಸಲು 7 ಸಾವಿರ ರೂ. ನೀಡಿ ಮಠದಿಂದ ರಶೀದಿ ಪಡೆದಿದ್ದರು. ಆದರೆ ಈ ರಶೀದಿಯನ್ನು ಹಿಡಿದು ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದಾಗ ದೇಗುಲದ ಕಚೇರಿಯಲ್ಲಿ ಮಠಕ್ಕೂ ನಮಗೂ ಸಂಬಂಧ ಇಲ್ಲವೆಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಮಠದ ಸಿಬ್ಬಂದಿ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸುಬ್ರಹ್ಮಣ್ಯ ಠಾಣೆಗೆ ಪಳನಿಸ್ವಾಮಿ ದೂರು ನೀಡಿದ್ದರು. ಹೀಗಾಗಿ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಬಿರುಕು ಉಂಟಾಗಿತ್ತು.