ಹುಬ್ಬಳ್ಳಿಗೆ 10 ಹೊಸ ಮೆಮು ರೈಲು ಸಂಚಾರ ಆರಂಭಿಸಿ: ಜೋಶಿ ಮನವಿ

Public TV
3 Min Read
Ashwini Vaishnaw Pralhad Joshi

* ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪ್ರಹ್ಲಾದ್‌ ಜೋಶಿ ಮನವಿ
* ಹುಬ್ಬಳ್ಳಿಯಲ್ಲಿ ಮತ್ತೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ಒತ್ತಾಯ

ನವದೆಹಲಿ: ಹುಬ್ಬಳ್ಳಿ-ಧಾರವಾಡ ಅಕ್ಕಪಕ್ಕದ ಪಟ್ಟಣಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ 10 ಹೊಸ ಮೆಮು ರೈಲುಗಳ ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರಲ್ಲಿ ಪ್ರಹ್ಲಾದ್‌ ಜೋಶಿ (Pralhad Joshi) ಮನವಿ ಮಾಡಿದರು.

ನವದೆಹಲಿಯಲ್ಲಿ ಬುಧವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿ ಮಾಡಿದ ಧಾರವಾಡ ಸಂಸದ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಪಟ್ಟಣ ಹಾಗೂ ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರಿಗಾಗಿ 10 ಹೊಸ ಮೆಮು (MEMU) ರೈಲುಗಳ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ನ್ಯಾ. ವರ್ಮಾ ನಡೆ ವಿಶ್ವಾಸ ಮೂಡಿಸುವುದಿಲ್ಲ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹುಬ್ಬಳ್ಳಿ ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿ ಆಗಿದ್ದು, ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ, ಇಲ್ಲಿ ಹೊಸ ಮೆಮು (ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌) ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪ್ಯಾಸೆಂಜರ್‌ ರೈಲು ಸಹ ಓಡಿಸಲು ಮನವಿ: ಹುಬ್ಬಳ್ಳಿ ನಗರಕ್ಕೆ ಶಿಕ್ಷಣ, ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಅಸಂಖ್ಯಾತ ಜನ ಸಂಚರಿಸುತ್ತಾರೆ. ದಿನನಿತ್ಯದ ರೈಲುಗಳು ಭರ್ತಿಯಾಗಿರುತ್ತವೆ. ಹಾಗಾಗಿ, ಜನ ಸಂಚಾರ ಅನುಕೂಲಕ್ಕೆ ಮೆಮು ರೈಲುಗಳು ಅಗತ್ಯತೆಯಿದೆ. ಈ ಭಾಗದಲ್ಲಿ ರಸ್ತೆ ಸಾರಿಗೆಗಿಂತ ರೈಲು ಸಂಚಾರ ಅನುಕೂಲಕರವಾಗಿ ಪರಿಣಮಿಸಿದ್ದು, ಕೋವಿಡ್‌ ವೇಳೆ ಸ್ಥಗಿತಗೊಳಿಸಿದ್ದ ಅನೇಕ ಪ್ಯಾಸೆಂಜರ್‌ ರೈಲು ಸಂಚಾರ ಸಹ ಆರಂಭಿಸುವಂತೆ ಸಚಿವ ಜೋಶಿ ಮನವಿ ಮಾಡಿದರು.

ಬೆಂಗಳೂರು ರೈಲು ನಿಲ್ದಾಣ ಬಿಟ್ಟರೆ ಹುಬ್ಬಳ್ಳಿಯೇ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ನಿತ್ಯ ಕಡಿಮೆ ಎಂದರೂ 50 ಸಾವಿರಕ್ಕೂ ಅಧಿಕ ಪ್ರಯಾಣಿಕರಿಂದ ತುಂಬಿರುತ್ತದೆ. ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣ ಭಾರತೀಯ ರೈಲ್ವೆಯಲ್ಲಿ ಮಹತ್ತರವಾಗಿದ್ದು, ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವುದು ಅತ್ಯಗತ್ಯವಾಗಿದೆ ಎಂದು ಅಶ್ವಿನಿ ವೈಷ್ಣವ್‌ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ – ಅಶ್ವಿನಿ ವೈಷ್ಣವ್

ಮತ್ತೊಂದು ರೈಲ್ವೆ ಬ್ರಿಡ್ಜ್‌ ನಿರ್ಮಾಣಕ್ಕೆ ಬೇಡಿಕೆ: ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸುವ ಬಗ್ಗೆ ಸಹ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ, ನಗರದ ಗದಗ ರಸ್ತೆ ಮೇಲಿರುವ ಡಬಲ್‌ ಲೈನ್ ರೈಲ್ವೆ ಬ್ರಿಡ್ಜ್‌ನ್ನು 4 ಲೈನ್‌ಗೆ ವಿಸ್ತರಿಸುವ ಸಲುವಾಗಿ ಇನ್ನೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು ಸಚಿವ ಪ್ರಹ್ಲಾದ್‌ ಜೋಶಿ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಹ ಈ ಬಗ್ಗೆ ಗಮನ ಸೆಳೆದರು.

ಉತ್ತರ ಕರ್ನಾಟಕದ ರೈಲ್ವೆ ಪ್ರತಿಯೊಂದು ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ ಆಧಾರ್‌ ಸೇವಾ ಕೇಂದ್ರ ಸ್ಥಾಪನೆಗೆ ಮನವಿ: ಇದೇ ವೇಳೆ ಕೇಂದ್ರ ಸಚಿವ ಜೋಶಿ ಅವರು, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ʼಆಧಾರ್ ಸೇವಾ ಕೇಂದ್ರʼವಾಗಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದರು. ವಾಣಿಜ್ಯ ನಗರಿ ಹುಬ್ಬಳ್ಳಿ ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದ್ದು, ಇಲ್ಲೀಗ ಆಧಾರ್‌ ಸೇವಾ ಕೇಂದ್ರ ಅತ್ಯಂತ ಅವಶ್ಯಕವಾಗಿದೆ. ದೇಶಾದ್ಯಂತ ಪ್ರತಿ ಜಿಲ್ಲಾವಾರು ಕೇಂದ್ರದ ಜೊತೆಗೆ ಪ್ರಮುಖ ನಗರಗಳಲ್ಲಿ ಸಹ ಈ ಕೇಂದ್ರಗಳನ್ನು ಮುಂದುವರಿಸುವಂತೆ ಕೋರಿದರು. ಜಿಲ್ಲಾ ಕೇಂದ್ರದ ಜತೆ ಹುಬ್ಬಳ್ಳಿ ಮತ್ತಿತರ ಪ್ರಮುಖ ನಗರಗಳಲ್ಲಿ ಆಧಾರ್‌ ಸೇವಾ ಕೇಂದ್ರಗಳನ್ನು ಮುಂದುವರಿಸುವಂತೆ ಟೆಂಡರ್ ಕರೆಯಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Share This Article