ಪ್ರತಾಪ್‌ ಸಿಂಹ ಅವ್ರು ಯಾವ ಹಿನ್ನೆಲೆಯಲ್ಲಿ ಪಾಸ್‌ ಕೊಟ್ಟರು ಎಲ್ಲವೂ ತನಿಖೆ ಆಗುತ್ತೆ: ಪ್ರಹ್ಲಾದ್‌ ಜೋಶಿ

Public TV
2 Min Read
PRALHAD JOSHI 2

ನವದೆಹಲಿ: ಪ್ರತಾಪ್‌ ಸಿಂಹ (Pratap Simha) ಅವರು ಯಾವ ಹಿನ್ನೆಲೆಯಲ್ಲಿ ಪಾಸ್‌ ಕೊಟ್ಟರು ಎಂಬುದೆಲ್ಲವೂ ತನಿಖೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯ ಘಟನೆ ವಿಷಾದನೀಯ, ಖಂಡನೀಯ. ಘಟನೆಯ ಬಳಿಕ ಲೋಕಸಭಾ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷತೆ ಮಾಡುವುದು ನಮ್ಮ ಉದ್ದೇಶ. 1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್‌

PRATAP SIMHA

ಆಯುಧ ಸೇರಿದಂತೆ ಇತ್ಯಾಧಿ ವಸ್ತು ಪಡೆದು ಗ್ಯಾಲರಿಗೆ ಬಂದಿರುವುದು ಇದೆ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ತೆಗೆದುಕೊಂಡ‌ ಪರಂಪರೆಯನ್ನು ಪರಿಶೀಲಿಸಿ ಅಂತೆಯೇ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ ತನಿಖೆಗೆ ಸ್ಪೀಕರ್ ಆದೇಶಿಸಿದ್ದಾರೆ. ಸದನದ ಮುಖ್ಯಸ್ಥರು ಸ್ಪೀಕರ್ ಅವರ ನಿರ್ಣಯ ಅಂತಿಮ. ಭದ್ರತೆಯನ್ನು ಅವರೇ ಅಂತಿಮ ಮಾಡುತ್ತಾರೆ. ಸರ್ಕಾರದ ಪಾತ್ರ ಇಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖೆಗೆ ನೀಡಿದ ಬಳಿಕ ಸದನ ಶುರುವಾಯಿತು. ಈ ವೇಳೆ ವಿರೋಧ ಪಕ್ಷಗಳ ಗಲಾಟೆ ಆರಂಭಿಸಿದವು. ಮತ್ತೆ ಸಭೆ ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿತು. ಆದರೆ ಇಂದೂ ಮತ್ತೆ ವಿಪಕ್ಷಗಳು ಗಲಾಟೆ ಆರಂಭಿಸಿವೆ. ತಪ್ಪಿತಸ್ಥರರಿಗೆ ಶಿಕ್ಷೆ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ. ದೇಶದ ಭದ್ರತೆಯ ವಿಚಾರದಲ್ಲಿ ಸ್ಪೀಕರ್ ಆದೇಶದಂತೆ ಕೆಲಸ ಮಾಡಲಿದೆ. ಪ್ರತಾಪ್ ಸಿಂಹ ಅವರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಲ್ಲವೂ ತನಿಖೆ ಆಗಲಿದೆ. ಯಾರನ್ನು ಯಾವ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪಾಸ್ ಕೊಟ್ಟ ವಿಚಾರವೂ ತನಿಖೆಗೆ ಒಳಪಡಲಿದೆ. ಮೂರು ಸಲ ಪಾಸ್ ಪಡೆದಿರುವುದು ಗೊತ್ತಿಲ್ಲ. ಮೈಸೂರಿನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ಇದನ್ನು ಮಹುವಾ ಮೊಯಿತ್ರಾ ಪ್ರಕರಣಕ್ಕೆ ಹೋಲಿಸಬೇಡಿ. ಇದು ಬೇರೆ ರೀತಿಯ ಪ್ರಕರಣ. ಜನಪ್ರತಿನಿಧಿಯಾಗಿ ಅವರು ಒಳ್ಳೆ ಉದ್ದೇಶದಿಂದ ಪಾಸ್ ಕೊಟ್ಟಿರುತ್ತಾರೆ.
ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ. ಎರಡನ್ನೂ ಹೋಲಿಸುವುದು ತಪ್ಪು ಎಂದರು.

Share This Article