ಮಂಡ್ಯ: ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಮುಖ್ಯಮಂತ್ರಿ ಆಗಿದ್ದಾಗ ಜನತಾ ದರ್ಶನ ಅತ್ಯದ್ಭುತವಾಗಿ ಯಶಸ್ವಿಯಾಗಿತ್ತು. ಜನರ ಸಮಸ್ಯೆ ಆಲಿಸುವ ಮೂಲಕವೇ ಮನೆ ಮಾತಾಗಿದ್ದರು. ಇದೀಗ ಮತ್ತೆ ಅದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ. ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಮಂಡ್ಯಕ್ಕೆ ಎರಡನೇ ಬಾರಿಗೆ ಆಗಮಿಸಿದ್ದ ಹೆಚ್‌ಡಿಕೆ, ಇಡೀ ದಿನ ಜನತಾ ದರ್ಶನ ನಡೆಸಿದರು.
ಮಂಡ್ಯದ (Mandya) ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಭಾಗಿಯಾಗಿದ್ದರು. ಪ್ರಾರಂಭದಲ್ಲೇ ವಿಶೇಷಚೇತನರ ಬಳಿಗೆ ತೆರಳಿ ಅರ್ಜಿಗಳನ್ನ ಸ್ವೀಕರಿಸಿದರು. ಕೇಂದ್ರ ಸಚಿವರು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಯಾವೊಬ್ಬ ಅಧಿಕಾರಿಗಳು ಕೂಡ ಬಂದಿರಲಿಲ್ಲ. ಇದು ಸಚಿವರ ಆಕ್ರೋಶಕ್ಕೆ ಕಾರಣವಾಯ್ತು. ರಾಜ್ಯ ಸರ್ಕಾರ ಹೊಸದಾಗಿ ಸುತ್ತೋಲೆ ಹೊರಡಿಸಿ ಅಧಿಕಾರಿಗಳು ಹೋಗದಂತೆ ತಡೆದಿದ್ದಾರೆ. ಇದು ನನ್ನ ಮನೆಯ ಕಾರ್ಯಕ್ರಮವಲ್ಲ. ಸರ್ಕಾರ ಸಣ್ಣತನ ತೋರುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಗೋಲ್ಮಾಲ್ ತನಿಖೆ ಮತ್ತೆ ಚುರುಕು – ನಾಗೇಂದ್ರ, ದದ್ದಲ್‌ಗೆ ಎಸ್‌ಐಟಿ ನೋಟಿಸ್
ಜನತಾ ದರ್ಶನಕ್ಕೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಒಮ್ಮೆಲೆ ಅಹವಾಲು ಸಲ್ಲಿಸಲು ಮುಗಿಬಿದ್ದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ವೇದಿಕೆ ಮೇಲೆ ಕುಳಿತು ಎಲ್ಲರ ಸಮಸ್ಯೆಗಳನ್ನ ಖುದ್ದು ಕುಮಾರಸ್ವಾಮಿ ಕೇಳಿದರು. ಊಟಕ್ಕೂ ಬ್ರೇಕ್ ಕೊಡದೇ ಜನರ ಸಮಸ್ಯೆ ಆಲಿಸುತ್ತಿದ್ದ ಕುಮಾರಸ್ವಾಮಿ, ಸಂಜೆ 4 ಗಂಟೆಗೆ ಅರ್ಜಿ ಸ್ವೀಕರಿಸುತ್ತಲೇ ಚಿತ್ರಾನ್ನ, ಮೊಸರನ್ನ ಸೇವಿಸಿದರು. ಜೆಡಿಎಸ್ ಶಾಸಕ ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಜನತಾ ದರ್ಶನಕ್ಕೂ ಮುನ್ನ ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬ ದೇಗುಲಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೂ ಮುನ್ನ ಮಾಡಿಕೊಂಡಿದ್ದ ಹರಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ