ನವದೆಹಲಿ: ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್‌ಗೆ ಷೇರು ಮಾರುಕಟ್ಟೆಯಿಂದ (Share Market) ಅಷ್ಟೇನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಒಂದು ಹಂತದಲ್ಲಿ ಸಾವಿರ ಅಂಕ ಕುಸಿದ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ನಂತರ ಏರಿಕೆ ಕಂಡು ಮತ್ತೆ ಇಳಿಕೆಯಾಯಿತು. ಅಂತಿಮವಾಗಿ 73.04 ಅಂಕ ಕುಸಿದು 80,429.04 ಅಂಕಗಳಿಗೆ ಮಂಗಳವಾರದ ತನ್ನ ವ್ಯವಹಾರವನ್ನು ಮುಗಿಸಿತು.
ಸೋಮವಾರ 80,724 ಅಂಕಗಳಿಗೆ ಮುಕ್ತಾಯವಾಗಿದ್ದ ಬಿಎಸ್‌ಇ ವ್ಯವಹಾರ ಇಂದು ಮಧ್ಯಾಹ್ನ 12:30ರ ವೇಳೆಗೆ 79,224 ಅಂಕಗಳಿಗೆ ಕುಸಿದಿತ್ತು. ನಂತರ ಮಧ್ಯಾಹ್ನ 2:30ರ ವೇಳೆಗೆ 80,766 ಅಂಕಗಳಿಗೆ ಏರಿಕೆ ಕಂಡು ಮತ್ತೆ ಕುಸಿಯಿತು. ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಂದು 30.20 ಅಂಕ ಕುಸಿದು 24,479.05 ರಲ್ಲಿ ವ್ಯವಹಾರ ಕೊನೆಗೊಳಿಸಿತು.
ಕುಸಿದಿದ್ದು ಯಾಕೆ?
ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ Long-Term Capital Gains (ದೀರ್ಘಾವಧಿಯ ಬಂಡವಾಳ ಲಾಭ – LTCG) ಮತ್ತು Short-Term Capital Gains (ಅಲ್ಪಾವಧಿಯ ಬಂಡವಾಳ ಲಾಭ – STCG) ತೆರಿಗೆ ಏರಿಕೆ ಮಾಡಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿದೆ. ಸದ್ಯ LTCG ಮೇಲೆ 10% ತೆರಿಗೆ ಇದ್ದರೆ ಅದನ್ನು 12.5% ಏರಿಕೆ ಮಾಡಲಾಗಿದೆ. STCG ಮೇಲೆ 15% ತೆರಿಗೆ ಇದ್ದರೆ ಅದನ್ನು 20% ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ
ಏನಿದು LTCG, STCG?
ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳನ್ನು ಖರೀದಿಸಿದ ದಿನಾಂಕದಿಂದ 12 ತಿಂಗಳುಗಳು ಪೂರ್ಣಗೊಳ್ಳುವ ಮೊದಲು ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ಅಲ್ಪಾವಧಿಗೆ ವರ್ಗೀಕರಿಸಲಾಗುತ್ತದೆ. ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳನ್ನು 12 ತಿಂಗಳ ಪೂರ್ಣಗೊಂಡ ನಂತರ ಮಾರಾಟ ಮಾಡಿದರೆ ಆಗುವ ಲಾಭ ಅಥವಾ ನಷ್ಟವನ್ನು ದೀರ್ಘಾವಧಿ ಎಂದು ವರ್ಗೀಕರಣ ಮಾಡಲಾಗುತ್ತದೆ.
ಪಟ್ಟಿಮಾಡದ ಈಕ್ವಿಟಿ ಷೇರುಗಳನ್ನು 24 ತಿಂಗಳ ಮೊದಲು ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ಅಲ್ಪಾವಧಿ ಎಂದು ಕರೆಯಲಾಗುತ್ತದೆ. ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು 24 ತಿಂಗಳ ನಂತರ ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ದೀರ್ಘಾವಧಿ ಎಂದು ಕರೆಯಲಾಗುತ್ತದೆ.
ಈ ಹೊಸ ಪ್ರಸ್ತಾಪ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಹಣಕಾಸಿನ ಆಸ್ತಿಗಳ ಮೇಲಿನ ಲಾಭದ ವಿನಾಯಿತಿ ಮಿತಿಯನ್ನು ಹಿಂದಿನ 1 ಲಕ್ಷ ರೂ. ನಿಂದ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ
ಈ ವರ್ಷ ಫೆಬ್ರವರಿಯಲ್ಲಿ 1 ರಂದು ಬಜೆಟ್ ಮಂಡನೆಯ ದಿನದಂದು ಸೆನ್ಸೆಕ್ಸ್ 106.81 ಅಂಕ ಕುಸಿದು 71,645.30 ಅಂಕಗಳಿಗೆ ಕುಸಿದಿತ್ತು. ಆದರೆ 6 ತಿಂಗಳಿನಲ್ಲಿ 9 ಸಾವಿರ ಅಂಕ ಏರಿಕೆಯಾಗಿದೆ.