ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ(Hampi) ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಯುನೆಸ್ಕೋ (UNESCO) ತಜ್ಞರ ತಂಡ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪ್ರವಾಸದ ವೇಳೆ ತಂಡದ ಸದಸ್ಯರು ಹಂಪಿಯ ಪ್ರಸಿದ್ಧ ಕಲ್ಲಿನ ರಥ ಹಾಗೂ ಸಪ್ತಸ್ವರ ಹೊರಹೊಮ್ಮಿಸುವ ವಿಜಯ ವಿಠ್ಠಲ ದೇವಾಲಯದ ಸಂಗೀತ ಮಂಟಪವನ್ನು ಕಣ್ತುಂಬಿಕೊಂಡು, ಸಂಗೀತದ ಸ್ವರಗಳನ್ನು ಆಲಿಸಿದರು. ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು ಯುನೆಸ್ಕೋ ತಂಡಕ್ಕೆ ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಇತಿಹಾಸ ಹಾಗೂ ವಾಸ್ತುಶಿಲ್ಪದ ಮಹತ್ವವನ್ನು ಪರಿಚಯಿಸಿದರು. ಈ ಭೇಟಿಯ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುನೆಸ್ಕೋ ತಂಡದ ಭೇಟಿಯ ಅಂಗವಾಗಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹೊಸಪೇಟೆಯಲ್ಲಿ ಮಹತ್ವದ ಪಾಲುದಾರರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಪ್ರವಾಸೋದ್ಯಮ, ಸಂಸ್ಕೃತಿ ಸೇರಿದಂತೆ 22ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿ ಮಹತ್ವದ ಚರ್ಚೆಗಳನ್ನು ನಡೆಸಿದರು.
ಸಭೆಯಲ್ಲಿ ಹಂಪಿಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ, ಕೃಷಿ ಪ್ರವಾಸೋದ್ಯಮ ಹಾಗೂ ಫಾರ್ಮ್ಸ್ಟೇಗಳಿಗೆ ಉತ್ತೇಜನ ನೀಡುವುದು, ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ಇದರೊಂದಿಗೆ ಅಂಜನಾದ್ರಿ ಬೆಟ್ಟದಲ್ಲಿ ರೋಪ್ವೇ ನಿರ್ಮಾಣ, ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ಕಮಲಾಪುರ ಕೆರೆ ಪುನರುಜ್ಜೀವನ, ಆಸ್ಪತ್ರೆ ಹಾಗೂ ಸ್ವಚ್ಛತಾ ವ್ಯವಸ್ಥೆ ಸುಧಾರಣೆ ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಹಂಪಿ ಬೈ ನೈಟ್ (Hampi by Night) ಯೋಜನೆಯನ್ನು ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಯುನೆಸ್ಕೋ ಅಂಗಸಂಸ್ಥೆ ಐಕೋಮೋಸ್ (ICOMOS) ತಜ್ಞರು, ಪಾರಂಪರಿಕ ತಾಣಗಳ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯವನ್ನು ದೂರವಿಟ್ಟರೆ ಜೀವಂತ ಪರಂಪರೆಯು ನಿರ್ಜೀವವಾಗುವ ಅಪಾಯವಿರುತ್ತದೆ ಎಂದು ಎಚ್ಚರಿಸಿದರು.
ಪಾರಂಪರಿಕ ರಕ್ಷಣೆಯ ಜತೆಗೆ ಸ್ಥಳೀಯ ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಬೇಕೆಂಬ ಸಲಹೆ ವ್ಯಕ್ತವಾಯಿತು. ಇದಕ್ಕೆ ಸ್ಪಂದಿಸಿದ ವಿಜಯನಗರ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಪ್ರಮುಖ ಸಲಹೆ-ಸೂಚನೆಗಳನ್ನು ಹಂಪಿಯ ನೂತನ ಸಮಗ್ರ ನಿರ್ವಹಣಾ ಯೋಜನೆಯಲ್ಲಿ (Integrated Management Plan) ಪರಿಗಣಿಸುವುದಾಗಿ ಭರವಸೆ ನೀಡಿದರು.


