– ಬುರ್ಕಿನಾ ಫಾಸೊ, ಸೆನೆಗಲ್‍ನಲ್ಲಿ ಗೌರವಾನ್ವಿತ ವ್ಯಕ್ತಿ
ಬೆಂಗಳೂರು: ಈ ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರವಿ ಪೂಜಾರಿಯನ್ನು ಬರೋಬ್ಬರಿ 26 ವರ್ಷಗಳ ಬಳಿಕ ಭಾರತಕ್ಕೆ ಕರೆತರಲಾಗಿದೆ. ವರ್ಷದ ಹಿಂದೆಯೇ ಅರೆಸ್ಟ್ ಆಗಿದ್ದರೂ ಪ್ರೊಸೀಜರ್ ಮುಗಿಸಿ ಕರೆತರೋಕೆ ವರ್ಷವೇ ಉರುಳಿ ಹೋಗಿದೆ.
ಕರ್ನಾಟಕದಲ್ಲಿ ಹುಟ್ಟಿದ್ದ ರವಿ ಪೂಜಾರಿ ಬಾಂಬೆ ಸೇರಿ ಮರ್ಡರ್ ಮಾಡಿದ್ದ. ಆ ಕೇಸಲ್ಲಿ ಜೈಲಿಗೆ ಹೋಗಿ ಬಂದು ಪುನಃ ಕೊಲೆ ಮಾಡಿ ದೇಶ ಬಿಟ್ಟಿದ್ದ. ನೇಪಾಳ ಮೂಲಕ ಮಲೇಷ್ಯಾ, ಉಗಾಂಡ, ಬುರ್ಕಿನಾ ಫಾಸೊ ಹೀಗೆ ಹಲವಾರು ದೇಶಗಳಲ್ಲಿ ಓಡಾಡ್ಕೊಂಡು ರಾಜಕಾರಣಿಗಳು, ಸಿನಿಮಾ ನಟರು, ಬ್ಯುಸಿನೆಸ್‍ಮೆನ್‍ಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡ್ತಿದ್ದ. ಈತನ ಪತ್ತೆಗಾಗಿ ಎಡಿಜಿಪಿ ಅಮರ್‍ಕುಮಾರ್ ಪಾಂಡೆ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಹೀಗಾಗಿ ಈತನ ಬಂಧನಕ್ಕಾಗಿ ರೆಡ್‍ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
2019ರ ಜನವರಿ 19ರಂದು ಸೆನೆಗಲ್‍ನ ಡಕಾರ್‍ನಲ್ಲಿ ಅರೆಸ್ಟ್ ಆಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನ 2020ರ ಫೆಬ್ರವರಿ 23ರಂದು ಅಂದರೆ ವರ್ಷಗಳ ಬಳಿಕ ಭಾರತಕ್ಕೆ ಕರೆತರಲಾಗಿದೆ. ನನ್ನನ್ನ ಭಾರತಕ್ಕೆ ಹಸ್ತಾಂತರ ಮಾಡ್ಬಾರ್ದು ಅನ್ನೋ ರವಿ ಪೂಜಾರಿಯ ಅರ್ಜಿಯನ್ನ ಸೆನೆಗಲ್ ದೇಶದ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಭಾರತಕ್ಕೆ ರವಿ ಪೂಜಾರಿಯನ್ನ ಕರೆ ತರೋದು ಸುಲಭವಾಗಿತ್ತು. ಬುರ್ಕಿನಾ ಫಾಸೊದ ಸಿಟಿಜನ್‍ಶಿಪ್ ಹೊಂದಿರುವ ರವಿಪೂಜಾರಿ ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದ. ಮೂರು ವರ್ಷದ ಹಿಂದೆ ಬುರ್ಕಿನಾ ಫಾಸೊದಿಂದ ಸೆನೆಗಲ್‍ಗೆ ಸ್ಥಳ ಬದಲಾಯಿಸಿದ್ದ ರವಿ ಪೂಜಾರಿ ಮಹಾರಾಜ ಹೆಸರಿನ ಹೋಟೆಲ್ ನಡೆಸ್ತಿದ್ದ. 2019ರ ಜನವರಿ 19 ರಂದು ಡಕಾರ್‍ನಲ್ಲಿ ಅರೆಸ್ಟ್ ಆದಾಗಿನಿಂದ ಇಲ್ಲಿಯತನಕ ರವಿ ಪೂಜಾರಿ ಜೈಲಿನಲ್ಲೇ ಇದ್ದ.
ತಿಲಕ್ ನಗರ ಡಬಲ್ ಮರ್ಡರ್ ಶೂಟೌಟ್ ಕೇಸ್‍ನಲ್ಲಿ ಸಿಸಿಬಿ 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. 97 ಕೇಸ್‍ಗಳು ಕರ್ನಾಟಕದಲ್ಲಿ ರವಿ ಪೂಜಾರಿ ಮೇಲಿದ್ದು, 47 ಕೇಸ್‍ಗಳು ಬೆಂಗಳೂರು ಸಿಟಿಯಲ್ಲೇ ಇವೆ. ಮುಂಬೈ, ಕೊಚ್ಚಿ, ಗುಜರಾತ್ ಸೇರಿದಂತೆ ಹಲವಾರು ಕಡೆ ಕೇಸ್‍ಗಳಿವೆ. ಬುರ್ಕಿನಾ ಫಾಸೊ ಮತ್ತು ಸೆನೆಗಲ್‍ನಲ್ಲಿ ರವಿ ಪೂಜಾರಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಸಮಾಜ ಸೇವೆ ಮಾಡಿ ಜನರಿಂದ ಒಳ್ಳೆ ವ್ಯಕ್ತಿ ಅನ್ನಿಸಿಕೊಂಡಿದ್ದ. ಈ ಎರಡೂ ದೇಶಗಳಲ್ಲಿ ಈತನ ಮೇಲೆ ಯಾವುದೇ ಕೇಸ್ ಗಳಿರಲಿಲ್ಲ. ಆಂಥೋನಿ ಫರ್ನಾಂಡಿಸ್ ಅಂತ ಹೆಸರು ಕೂಡ ಚೇಂಜ್ ಮಾಡ್ಕೊಂಡಿದ್ದ ಈತನಿಗೆ ಗುರು ಚೋಟಾ ರಾಜನ್ ಟೋನಿ ಫರ್ನಾಂಡಿಸ್ ಅಂತ ಹೆಸ್ರು ನೀಡಿದ್ದನಂತೆ. ಬಳಿಕ ಸೆನೆಗಲ್ ನಲ್ಲಿ ಆಂಟೋನಿ ಫರ್ನಾಂಡಿಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದು, ವಿವಿಧ ಹೆಸರುಗಳಲ್ಲಿ ರವಿ ಪೂಜಾರಿ ಹಲವಾರು ಪಾಸ್ ಪೋರ್ಟ್ ಹೊಂದಿದ್ದ.
2018ರ ಜುಲೈ 18ರಂದು ಈತನ ಶೋಧಕಾರ್ಯಕ್ಕೆ ಇಳಿದಿದ್ದ ಅಮರ್ ಕುಮಾರ್ ಪಾಂಡೆ, 2019ರ ಜನವರಿ 19ರಂದು ಸೆನೆಗಲ್ ನಲ್ಲಿ ಅರೆಸ್ಟ್ ಮಾಡುವಂತೆ ಕೆಲಸ ನಿರ್ವಹಿಸಿದ್ರು. ಅಮರ್ ಕುಮಾರ್ ಪಾಂಡೆ ಜೊತೆ ಡಿಐಜಿ ಸಂದೀಪ್ ಪಾಟೀಲ್ ತಂಡ ಕೆಲಸ ಮಾಡಿತ್ತು. ಇಂಟರ್‍ನೆಟ್ ಕಾಲ್ ನಿಂದ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಡ್ತಿದ್ದ ಪಾತಕಿ ಮೇಲೆ ನೂರಾರು ಕೇಸ್‍ಗಳಿವೆ. ಕರ್ನಾಟಕದಲ್ಲಿ ನಡೆದ ಕೊಲೆ, ಹಾಗೂ ಬೆದರಿಕೆ ಕೇಸ್‍ಗಳ ತನಿಖೆ ಮುಗಿದ ತಕ್ಷಣ ಬಾಡಿವಾರೆಂಟ್ ಮೇಲೆ ಪಾತಕಿಯನ್ನ ವಶಕ್ಕೆ ಪಡೆಯಲು, ರಾ, ಐಬಿ ಹಾಗೂ ಮಹಾರಾಷ್ಟ್ರ ಪೊಲೀಸರು ಕಾಯುತ್ತಿದ್ದಾರೆ.