ಧಾರವಾಡ: ನಗರದಲ್ಲಿ ನೋಡನೋಡುತ್ತಿದ್ದಂತೆ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವನ್ನಪ್ಪಿ, 50ಕ್ಕೂ ಹೆಚ್ಚು ಕಾರ್ಮಿಕರು ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಗರದ ಕೆವಿಜಿ ಬ್ಯಾಂಕ್ ಬಳಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ಒಂದು ವರ್ಷದಿಂದ ನಡೆಯುತಿತ್ತು. ಇಂದು ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ ಏಕಾಏಕಿ ಕಟ್ಟಡ ಕುಸಿದಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರ್ಮಾಣದ ಕೆಲಸ ನಡೆಯುತ್ತಿದ್ದ ವೇಳೆಯಲ್ಲಿಯೇ ಸಂಪೂರ್ಣ ಕುಸಿದು ನೆಲಸಮವಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜೊತೆ ಸ್ಥಳೀಯರು ಕೈಜೋಡಿಸಿದ್ದು, ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಹೊರತೆಯಲು ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಘಟನೆಯಲ್ಲಿ ಗಾಯಗೊಂಡಿರುವ ಮಂದಿಯನ್ನು ಬಸ್ ಹಾಗೂ ಇತರೇ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿ ದೀಪಾ ಚೇಳನ್ ಅವರು ಖುದ್ದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಸದ್ಯ ಕಟ್ಟಡದಡಿಯಲ್ಲಿ ಸಿಲುಕಿದ್ದ 10- 15 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ.