ಆಗ್ರಾ: 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಸಂಬಂಧಿಕನೇ ಮದುವೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಮಗುವನ್ನು ಯಾರಿಗೂ ತಿಳಿಯದಂತೆ ಪೊದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೋಹಿಯಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಪೋಹಿಯಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಮದುವೆಗೆ ಬಂದಿದ್ದ ಮಗುವನ್ನು ಸಂಬಂಧಿಕನೊಬ್ಬ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಿಂದ ಯಾರಿಗೂ ತಿಳಿಯದಂತೆ ಎತ್ತುಕೊಂಡು ಹೋಗಿ, ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ತುಸು ದೂರದಲ್ಲಿದ್ದ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿದ್ದ ಮಗುವನ್ನು ಎಸೆದು ಹೋಗಿದ್ದಾನೆ.
ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಮಗು ಕಾಣದಿದ್ದಾಗ, ತಾಯಿ ಹಾಗೂ ಕೆಲವರು ಮಗುವನ್ನು ಸುತ್ತಮುತ್ತ ಹುಡುಕಿದ್ದಾರೆ. ಆಗ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿದ್ದ ಪೊದೆಯೊಂದರ ನಡುವೆ ಮಗು ಜ್ಞಾನ ತಪ್ಪಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಈ ವೇಳೆ ನಡೆದಿರುವ ವಿಷಯದ ಬಗ್ಗೆ ತಾಯಿ ಬಹಿರಂಗಪಡಿಸಲು ಮುಂದಾದಾಗ ಆಕೆಯ ಸಂಬಂಧಿಕರು ಯಾರಿಗೂ ತಿಳಿಸಿದಂತೆ ಹೇಳಿ ತಾಯಿ ಮಗುವನ್ನು ಸ್ಥಳದಿಂದ ಕಳುಹಿಸಿದ್ದಾರೆ.
ಬಳಿಕ ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ. ಅಲ್ಲದೆ ಮಗುವಿನ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.