ಬೆಂಗಳೂರು: ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆಯುವ, ಪರಿಹಾರಕ್ಕಾಗಿ ಸಿಎಂ ಯಡಿಯೂರಪ್ಪ ಕರೆದಿದ್ದ ಜಿಲ್ಲಾವಾರು ಬಿಜೆಪಿ ಶಾಸಕರ ಸಭೆಗೆ ಕತ್ತಿ ಗೈರಾಗಿದ್ದಾರೆ.
ಸಿಎಂ ಅವರ ಈ ಪ್ರಮುಖ ಸಭೆಗೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಉಮೇಶ್ ಕತ್ತಿ ಗೈರಾಗಿದ್ದು ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ಬೆಳಗಾವಿ ಜಿಲ್ಲಾ ನೆರೆಪೀಡಿದ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದ್ದ ವೇಳೆಯೂ ಉಮೇಶ್ ಕತ್ತಿ ಗೈರಾಗಿದ್ದರು. ಆದರೆ ಸಭೆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಸಿಎಂ ಬಿಎಸ್‍ವೈ ಅವರು, ಇವತ್ತಿನ ಸಭೆಗೆ ಕೆಲವರು ಬಾರದಿರುವುದಕ್ಕೆ ಅಸಮಾಧಾನ ಕಾರಣ ಅಲ್ಲ. ಯಾವ ಶಾಸಕರಲ್ಲೂ ಅಸಮಾಧಾನ ಇಲ್ಲ. ಉಮೇಶ್ ಕತ್ತಿ ಅವರು ಬೆಳಗ್ಗೆ ಮನೆಗೆ ಬಂದು ಮಾತಾಡಿಕೊಂಡು ಹೋದರು ಎಂದು ಹೇಳಿದರು.
ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ನೆರೆಯಿಂದ ಸಮಸ್ಯೆಗೆ ಸಿಲುಕಿರುವ ಕ್ಷೇತ್ರಗಳ ಶೇ.90 ರಷ್ಟು ಶಾಸಕರು ಹಾಜರಾಗಿದ್ದರು. ನೆರೆ ಪರಿಹಾರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಶಾಸಕರಿಂದ ಮಾಹಿತಿ ಪಡೆದಿದ್ದೇವೆ. ಇದುವರೆಗೂ ರಾಜ್ಯ ಸರ್ಕಾರದ ಪರಿಹಾರ ಕುರಿತ ಅಂಕಿ ಅಂಶ ಬಗ್ಗೆ ಹೇಳಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಂದು ಬಿಜೆಪಿ ಶಾಸಕರ ಸಭೆಯನ್ನು ಸಿಎಂ ಕರೆದಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಕರೆಯುತ್ತಾರೆ ಎಂದರು. ಅಲ್ಲದೇ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೊಡ್ಡವರೆಲ್ಲಾ ಜಾಣರಲ್ಲ ಎನ್ನುತ್ತಾರೆ. ಆದೇ ರೀತಿ ನಮಗೂ ಆಗಿದೆ ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.
ರಾಜ್ಯ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ಸಿಎಂ ಬಿಎಸ್‍ವೈ ಅವರು ಶಾಸಕರ ಸರಣಿ ಸಭೆ ನಡೆಸಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರಿನ ಬಿಜೆಪಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕೂಡ ಭೇಟಿ ನೀಡಿದ್ದರು.
ಸಭೆಯಲ್ಲಿ ಶಾಸಕರು ಕೇಂದ್ರದಿಂದ ಪರಿಹಾರ ವಿಳಂಬವಾಗಿರುವ ಕುರಿತು ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ತಾತ್ಕಾಲಿಕವಾಗಿ ಶೆಡ್ ನಿರ್ಮಾಣಕ್ಕಾದರೂ ಹಣ ಕೊಡಿ ಎಂದು ಶಾಸಕರು ಮನವಿ ಮಾಡಿದ್ದಾರೆ. ಶಾಸಕರ ಬೇಡಿಕೆಗೆ ಸ್ಪಧಿಸಿರುವ ಸಿಎಂ 10 ಜಿಲ್ಲೆಗಳ ತುರ್ತು ಕಾಮಗಾರಿಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತ ಮೂಡಿಗೆರೆಯಲ್ಲಿ 5 ಎಕರೆ ಕಾಫಿತೋಟ ಕಳೆದುಕೊಂಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾ ಚನ್ನಪ್ಪಗೌಡ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.